ADVERTISEMENT

ಜೀತದಾಳು ಕಳ್ಳಸಾಗಣೆ ತಡೆಗೆ ‍ಪ್ರಸ್ತಾವ ಸಲ್ಲಿಸಲು ಸುಪ್ರೀಂ ಕೋರ್ಟ್‌ ಸೂಚನೆ

ಪಿಟಿಐ
Published 21 ನವೆಂಬರ್ 2024, 14:28 IST
Last Updated 21 ನವೆಂಬರ್ 2024, 14:28 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಬಾಲಕರನ್ನೂ ಒಳಗೊಂಡಂತೆ ಜೀತದಾಳುಗಳ ಅಂತರರಾಜ್ಯ ಕಳ್ಳಸಾಗಣೆ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜತೆ ಸಭೆ ನಡೆಸಿ, ಪ್ರಸ್ತಾವನೆ ಸಿದ್ಧಪಡಿಸುವಂತೆ ಸುಪ್ರೀಂ ಕೋರ್ಟ್‌ ಗುರುವಾರ ನಿರ್ದೇಶನ ನೀಡಿದೆ.

ಜೀತದಾಳುಗಳ ಕಳ್ಳಸಾಗಣೆ ತಪ್ಪಿಸಲು ಮತ್ತು ಅವರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್‌ ಅವರ ಪೀಠ ನಡೆಸಿತು.

ADVERTISEMENT

ಉತ್ತರ ಪ್ರದೇಶದಲ್ಲಿ ಬಿಡುಗಡೆಯಾದ 5,264 ಜೀತದಾಳುಗಳ ಪೈಕಿ, 1,101 ಜನರಿಗೆ ಮಾತ್ರ ತಕ್ಷಣವೇ ಆರ್ಥಿಕ ನೆರವು ದೊರೆತಿದ್ದು, ಉಳಿದವರು ನೆರವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಮಾಹಿತಿಯನ್ನು ಗಮನಿಸಿದ ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಪ್ರಕರಣದ ಗಂಭೀರತೆಯನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಬಿ.ಆರ್. ಗವಯ್ ಹಾಗೂ ಕೆ.ವಿ. ವಿಶ್ವನಾಥನ್ ಅವರನ್ನು ಒಳಗೊಂಡ ಪೀಠವು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಟಾರ್ನಿ ಜನರಲ್ ಅವರ ನೆರವನ್ನೂ ಪಡೆಯುವುದಾಗಿ ತಿಳಿಸಿತು. ಬಿಡುಗಡೆಯಾದ ಜೀತದಾಳುಗಳಲ್ಲಿ ಮಕ್ಕಳೂ ಇರುವುದರಿಂದ ತಕ್ಷಣಕ್ಕೆ ಅವರ ನೆರವಿಗೆ ಹಣಕಾಸಿನ ನೆರವು ಅಗತ್ಯ ಇರುವುದನ್ನು ಉಲ್ಲೇಖಿಸಿತು.

ಸಮಸ್ಯೆ ಬಗೆಹರಿಸಲು ಪರಿಹಾರದ ಕುರಿತು ನಿರ್ಧರಿಸುವಾಗ ರಾಷ್ಟ್ರೀಯ ಮಾವನ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಸಲಹೆಯನ್ನೂ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ಮಕ್ಕಳ ಅಂತರರಾಜ್ಯ ಕಳ್ಳಸಾಗಣೆ ಸಮಸ್ಯೆಯನ್ನು ಪರಿಹರಿಸಲು, ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಏಕೀಕೃತ ರೀತಿಯಲ್ಲಿ ಸಾಗಬೇಕಿದೆ ಎಂದು ಹೇಳಿದ ಪೀಠ, ವಿಚಾರಣೆಯನ್ನು ಆರು ವಾರಗಳವರೆಗೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.