ADVERTISEMENT

ಬಲವರ್ಧಿತ ಅಕ್ಕಿ ವಿತರಣೆಗೆ ಅನುಮೋದನೆ: ಮಾರ್ಚ್‌ 2024ರೊಳಗೆ 3 ಹಂತಗಳಲ್ಲಿ ಪೂರೈಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 19:31 IST
Last Updated 8 ಏಪ್ರಿಲ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿ ಸಾರ್ವಜನಿಕರಿಗೆ ಬಲವರ್ಧಿತ ಅಕ್ಕಿ ವಿತರಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.

ಭಾರತೀಯ ಆಹಾರ ನಿಗಮ (ಎಫ್‌ಸಿಐ) ಹಾಗೂ ಆಯಾ ರಾಜ್ಯಗಳ ಏಜೆನ್ಸಿಗಳು ಅಗತ್ಯ ಕಡೆಗಳಲ್ಲಿ ವಿತರಿಸುವ ನಿಟ್ಟಿನಲ್ಲಿ ಈಗಾಗಲೇ ಒಟ್ಟು 88.65 ಲಕ್ಷ ಮೆಟ್ರಿಕ್‌ ಟನ್‌ ಬಲವರ್ಧಿತ ಅಕ್ಕಿಯನ್ನು ಖರೀದಿಸಿದ್ದು, ಒಟ್ಟು 3 ಹಂತಗಳಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದರು.

ಮೊದಲ ಹಂತದಲ್ಲಿ ಮಕ್ಕಳ ಸಂಯೋಜಿತ ಅಭಿವೃದ್ಧಿ ಸೇವೆಗಳು (ಐಸಿಡಿಎಸ್) ಮತ್ತು ಪ್ರಧಾನಮಂತ್ರಿ ಪೋಷಣ್‌ ಕಾರ್ಯಕ್ರಮಗಳ ಅಡಿ ಅಕ್ಕಿ ವಿತರಿಸಲಾಗುವುದು ಎಂದು ಅವರು ಹೇಳಿದರು.

ADVERTISEMENT

ಪೌಷ್ಟಿಕಾಂಶದ ಕೊರತೆ ಇರುವ ಪ್ರಮುಖ ಜಿಲ್ಲೆಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿ 2023ರ ಮಾರ್ಚ್ ಒಳಗೆ 2ನೇ ಹಂತ ಹಾಗೂ ಅಂತಿಮ ಹಂತದ ಭಾಗವಾಗಿ ಉಳಿದ ಜಿಲ್ಲೆಗಳಲ್ಲಿ 2024ರ ಮಾರ್ಚ್ ಒಳಗೆ ವಿತರಣಾ ಕಾರ್ಯ ಆರಂಭವಾಗಲಿದೆ ಎಂದು ಅವರು ವಿವರಿಸಿದರು.

ಪೌಷ್ಟಿಕಾಂಶದ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸಾಮಾನ್ಯ ಅಕ್ಕಿಗೆ ಕಬ್ಬಿಣ, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ–12ನಂತಹ ಸೂಕ್ಷ್ಮ ಪೋಷಕಾಂಶಗಳನ್ನು ಸೇರಿಸಿ, ವಿತರಿಸುವ ಈ ಯೋಜನೆಗಾಗಿ ಕೇಂದ್ರಕ್ಕೆ ವಾರ್ಷಿಕ ಅಂದಾಜು ₹ 2,700 ಕೋಟಿ ವೆಚ್ಚ ತಗುಲಲಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.