ADVERTISEMENT

ನಟ ಸಲ್ಮಾನ್‌ ಮೇಲೆ ದಾಳಿ ಸಂಚು ಪ್ರಕರಣ: ಬಿಷ್ಣೋಯ್‌ ಗುಂಪಿನ ನಾಲ್ವರ ಬಂಧನ

ಪಿಟಿಐ
Published 1 ಜೂನ್ 2024, 10:33 IST
Last Updated 1 ಜೂನ್ 2024, 10:33 IST
<div class="paragraphs"><p>ಸಲ್ಮಾನ್ ಖಾನ್ </p></div>

ಸಲ್ಮಾನ್ ಖಾನ್

   

–ಪಿಟಿಐ ಚಿತ್ರ

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಲಾರೆನ್ಸ್‌ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದ ನಾಲ್ವರನ್ನು ನವಿಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.

ADVERTISEMENT

ಧನಂಜಯ್‌ ತಾಪೆಸಿಂಗ್‌ ಅಲಿಯಾಸ್ ಅಜಯ್ ಕಶ್ಯಪ್‌, ಗೌರವ್ ಭಾಟಿಯಾ ಅಲಿಯಾಸ್ ನಹ್ವಿ, ವಸ್ಪಿ ಖಾನ್‌ ಅಲಿಯಾಸ್ ವಸೀಮ್‌ ಚಿಕ್ನಾ ಹಾಗೂ ರಿಜ್ವಾನ್‌ ಖಾನ್‌ ಅಲಿಯಾಸ್ ಜಾವೇದ್‌ ಖಾನ್‌ ಬಂಧಿತರು.

‘ಬಂಧಿತ ಈ ನಾಲ್ವರು, ಜೈಲಿನಲ್ಲಿರುವ ಲಾರೆನ್ಸ್‌ ಬಿಷ್ಣೋಯ್‌ ಹಾಗೂ ಆತನ ತಮ್ಮ ಅನ್ಮೋಲ್‌ ಬಿಷ್ಣೋಯ್‌ ಸಂಪರ್ಕದಲ್ಲಿದ್ದರು. ಈ ಸಹೋದರರ ಆಣತಿಯಂತೆ, ಸಲ್ಮಾನ್‌ಗೆ ಸೇರಿದ ಸ್ಥಳಗಳು ಹಾಗೂ ಅವರ ಫಾರ್ಮ್‌ಹೌಸ್‌ನಲ್ಲಿ ಬಂಧಿತರು ಪರಿಶೀಲನೆ ಕೈಗೊಂಡಿದ್ದರು’ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಷ್ಣೋಯ್‌ ಸಹೋದರರು ಸೇರಿದಂತೆ 17 ಜನರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಏಪ್ರಿಲ್‌ 14ರಂದು ಮುಂಬೈನ ಬಾಂದ್ರಾದಲ್ಲಿರುವ ನಟ ಸಲ್ಮಾನ್ ಖಾನ್‌ ನಿವಾಸ, ‘ಗ್ಯಾಲಕ್ಸಿ  ಅಪಾರ್ಟ್‌ಮೆಂಟ್ಸ್‌’ ಹೊರಗಡೆ ಹಲವು ಸುತ್ತು ಗುಂಡು ಹಾರಿಸಿದ್ದರು. ಇದರ ಬೆನ್ನಲ್ಲೇ ತನಿಖೆ ಕೈಗೊಂಡಿದ್ದ ಪೊಲೀಸರು, ವಿಕಿ ಗುಪ್ತಾ ಹಾಗೂ ಸಾಗರ್‌ ಪಾಲ್ ಎಂಬುವವರನ್ನು ಗುಜರಾತ್‌ನಲ್ಲಿ ಬಂಧಿಸಿದ್ದರು.

ಈ ಇಬ್ಬರಿಗೆ ಆಯುಧಗಳನ್ನು ಪೂರೈಕೆ ಮಾಡಿದ ಆರೋಪದಡಿ, ಸೋನು ಬಿಷ್ಣೋಯ್‌ ಹಾಗೂ ಅನುಜ್ ಥಾಪನ್‌ ಎಂಬುವವರನ್ನು ನಂತರ ಪಂಜಾಬ್‌ನಲ್ಲಿ ಬಂಧಿಸಿದ್ದರು. ಪೊಲೀಸ್ಟ್‌ ಕಸ್ಟಡಿಯಲ್ಲಿದ್ದ ವೇಳೆ, ಥಾಪನ್‌ ನೇಣಿಗೆ ಶರಣಾದ ಎಂದು ಹೇಳಲಾಗಿದೆ. 

ಬಿಷ್ಣೋಯ್‌ ಗ್ಯಾಂಗ್‌ನ ಸಾಮಾಜಿಕ ಜಾಲತಾಣ ಜಾಲಾಡಿದ ಪೊಲೀಸರು

ಮುಂಬೈ: ನಟ ಸಲ್ಮಾನ್‌ ಖಾನ್‌ ಮೇಲೆ ದಾಳಿಗೆ ಸಂಚು ರೂಪಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಬಿಷ್ಣೋಯ್‌ ಗ್ಯಾಂಗ್‌ನ ನಾಲ್ವರನ್ನು ಬಂಧಿಸುವುದಕ್ಕೂ ಮುನ್ನ ಗ್ಯಾಂಗಿನ ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳು ಜಾಲಾಡಿದ್ದರು ಎಂದು ಡಿಸಿಪಿ(ಪನವೇಲ್) ವಿವೇಕ್‌ ಪಾನ್ಸರೆ ಶನಿವಾರ ಹೇಳಿದ್ದಾರೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ‘ನಟ ಸಲ್ಮಾನ್‌ ಅವರ ಮೇಲೆ ದಾಳಿ ನಡೆಸಲು ಸಂಚು ರೂಪಿಸಲಾಗುತ್ತಿರುವ ಕುರಿತು ಹಿರಿಯ ಇನ್ಸ್‌ಪೆಕ್ಟರ್‌ ನಿತಿನ್‌ ಠಾಕ್ರೆ ಅವರಿಗೆ ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ಮಾಹಿತಿ ಲಭಿಸಿತ್ತು’ ಎಂದರು.

‘ಈ ಗ್ಯಾಂಗ್‌ನ ವಾಟ್ಸ್‌ಆ್ಯಪ್‌ ಹಾಗೂ ಇತರ ಸಾಮಾಜಿಕ ಜಾಲತಾಣ ಗ್ರೂಪ್‌ಗಳನ್ನು ಪರಿಶೀಲನೆ ನಡೆಸಿದ ನವಿಮುಂಬೈ ಪೊಲೀಸ್‌ ಅಧಿಕಾರಿಗಳ ತಂಡವೊಂದು ಈ ಗ್ರೂಪ್‌ಗಳ ಮೂಲಕ ನಡೆಯುತ್ತಿದ್ದ ಚಾಟ್‌ಗಳ ಮೇಲೆ ನಿಗಾ ಇಟ್ಟಿದ್ದರು’ ಎಂದರು.

‘ವಿದೇಶಗಳಿಂದ ಆಯುಧಗಳನ್ನು ತರಿಸಿಕೊಳ್ಳುವ ಪ್ರಯತ್ನಗಳು ಸಹ ನಡೆದಿದ್ದವು. ಈ ಎಲ್ಲ ಮಾಹಿತಿ ಕಲೆ ಹಾಕಿದ ನಂತರ 17 ಜನರ ವಿರುದ್ಧ ಏಪ್ರಿಲ್‌ನಲ್ಲಿ ಪ್ರಕರಣ ದಾಖಲಿಸಲಾಯಿತು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.