ADVERTISEMENT

ನಾಲ್ಕು ದಿನಗಳ ಸೇನಾ ಕಮಾಂಡರ್‌ಗಳ ಸಮಾವೇಶ ಇಂದಿನಿಂದ ಪ್ರಾರಂಭ

ಏಜೆನ್ಸೀಸ್
Published 26 ಅಕ್ಟೋಬರ್ 2020, 4:06 IST
Last Updated 26 ಅಕ್ಟೋಬರ್ 2020, 4:06 IST
ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್   

ನವದೆಹಲಿ: ಭಾರತೀಯ ಸೇನೆಯ ಉನ್ನತ ಕಮಾಂಡರ್‌ಗಳ ನಾಲ್ಕು ದಿನಗಳ ದ್ವೈವಾರ್ಷಿಕ ಸಮಾವೇಶ ಇಂದಿನಿಂದ (ಅ.26) ನವದೆಹಲಿಯಲ್ಲಿ ಆರಂಭವಾಗಲಿದೆ. ಸೇನೆಯ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ, ಕಾರ್ಯಾಚರಣೆ ಸಾಮರ್ಥ್ಯ ವೃದ್ಧಿ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ಆಂತರಿಕ ಸಮಿತಿಗಳು ಮಾಡಿರುವ ಶಿಫಾರಸುಗಳ ಕುರಿತು ಈ ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಸಮಾವೇಶದಲ್ಲಿ ಸೇನೆಯ ಉನ್ನತ ಅಧಿಕಾರಿಗಳು,ಸೇನಾ ಕಮಾಂಡರ್‌ಗಳು, ಸೇನಾ ಮುಖ್ಯ ಕಚೇರಿಯ ಸಿಬ್ಬಂದಿ ವಿಭಾಗದ ಮುಖ್ಯಾಧಿಕಾರಿಗಳು(ಪಿಎಸ್‌ಒ) ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಮೊದಲ ದಿನ ಮಾನವ ಸಂಪನ್ಮೂಲ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಮಾವೇಶವನ್ನು ಉದ್ದೇಶಿಸಿ ಅಕ್ಟೋಬರ್ 27ರಂದು ಮಾತನಾಡಲಿದ್ದಾರೆ. ರಕ್ಷಣಾ ಸಚಿವರ ಭಾಷಣಕ್ಕೆ ಮುಂಚಿತವಾಗಿ ಮೂರೂ ಸಶಸ್ತ್ರಪಡೆಗಳ ಮುಖ್ಯಸ್ಥರು(ಸಿಡಿಎಸ್) ಮತ್ತು ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಯಮುಖ್ಯಸ್ಥರು ಕಮಾಂಡರ್‌ಗಳನ್ನು ಉದ್ದೇಶಿಸಿ ಸಮಾವೇಶದಲ್ಲಿ ಮಾತನಾಡಲಿದ್ದಾರೆ ಎಂದು ಭಾರತೀಯ ಸೇನೆಯು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಮೂರನೇ ದಿನ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್‌ನ ಮುಖ್ಯಸ್ಥರು ಸೇರಿದಂತೆ ವಿವಿಧ ಸೇನಾ ಕಮಾಂಡರ್‌ಗಳು ಯೋಜಿಸಿರುವ ವಿವಿಧ ಕಾರ್ಯಸೂಚಿಗಳ ಕುರಿತು ಆಳವಾದ ಚರ್ಚೆ ನಡೆಯಲಿದೆ. ಇದಾದ ನಂತರ ವಿವಿಧ ಪ್ರಧಾನ ಸಿಬ್ಬಂದಿ ಅಧಿಕಾರಿಗಳಿಂದ ವಿವಿಧ ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ಚರ್ಚೆ ನಡೆಯಲಿವೆ.

ನಾಲ್ಕನೇ ಮತ್ತು ಕೊನೆಯ ದಿನ ಸಮಾವೇಶದಲ್ಲಿ ಗಡಿ ರಸ್ತೆಗಳ ಪ್ರಧಾನ ನಿರ್ದೇಶಕರಯ (ಡಿಜಿಬಿಆರ್) ಗಡಿ ರಸ್ತೆಗಳ ಸಂಘಟನೆಯು (ಬಿಆರ್‌ಒ) ಕೈಗೊಳ್ಳುತ್ತಿರುವ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಮತ್ತು ಸಂಯೋಜಿತ ನವೀಕರಣದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಲ್ಲದೆ ಸೇನೆಯ ವಿವಿಧ ಹಂತಗಳಲ್ಲಿ ಮಾನವಶಕ್ತಿಯ ಬಳಕೆಯನ್ನು ಉತ್ತಮಗೊಳಿಸುವ ಸ್ವಯಂಚಾಲಿತ ಕ್ರಮಗಳ ಬಗ್ಗೆಯೂ ಚರ್ಚಿಸಲಾಗುವುದು.

ಸ್ಪೋರ್ಟ್ಸ್ ಟ್ರೋಫಿ ಮತ್ತು ಫ್ಲೈಟ್ ಸೇಫ್ಟಿ ಟ್ರೋಫಿಯನ್ನು ನೀಡುವುದರೊಂದಿಗೆ ಸಮ್ಮೇಳನವು ಮುಕ್ತಾಯಗೊಳ್ಳಲಿದ್ದು, ನಂತರ ಸೇನಾ ಮುಖ್ಯಸ್ಥರು ಸಮಾರೋಪ ಭಾಷಣ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.