ತಿರುವನಂತಪುರ: ಕೇರಳದಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಕಳೆದ ಎರಡು ದಿನಗಳಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ವಯನಾಡು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಹಾಗೂ ಎಂಟು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಅನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಘೋಷಿಸಿದೆ. ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಯಾಣ ಬೆಳಸುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ತಿರುವನಂತಪುರ, ಪಾಲಕ್ಕಾಡ್, ಇಡುಕ್ಕಿ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ತಿರುವನಂತಪುರದ ಮರಿಯಾಪುರಂ ಬಳಿ ಸಮುದ್ರದಲ್ಲಿ ದೋಣಿ ಮುಳುಗಿ ಮೀನುಗಾರ ಅಲೋಶಿಯಸ್ (45) ಮೃತಪಟ್ಟಿದ್ದಾರೆ. ಇಡುಕ್ಕಿಯ ಮಂಕುಲಂನಲ್ಲಿ 23 ವರ್ಷದ ಸನೀಶ್ ನದಿಯಲ್ಲಿ ಮುಳುಗಿ ಸಾವೀಗಿಡಾಗಿದ್ದಾರೆ. ಆಲಪ್ಪುಳದಲ್ಲಿ ಮರ ಉರುಳಿ ಬಿದ್ದು ಉನೈಜ್ (28) ಮೃತಪಟ್ಟಿದ್ದಾರೆ. ಮತ್ತೊಂದೆಡೆ ಪಾಲಕ್ಕಾಡ್‌ನ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬುಧವಾರ ಪತ್ತೆಯಾಗಿದೆ.
ರಾಜ್ಯಾದ್ಯಂತ ರಸ್ತೆ ಮೇಲೆ ಮರಗಳು ಉರುಳಿ ಬಿದ್ದಿರುವ ಘಟನೆಗಳು ಹೆಚ್ಚಾಗಿ ವರದಿಯಾಗಿದ್ದು, ತಿರುವನಂತಪುರದಲ್ಲಿ ಕಾರಿನಲ್ಲಿದ್ದ ಮಹಿಳೆಯೊಬ್ಬರ ಮೇಲೆ ಮರ ಬಿದ್ದು ಮೃತಪಟ್ಟಿದ್ದಾರೆ.
ಭೂಕುಸಿತ ಸಂಭವಿಸಿರುವ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಅಧಿಕಾರಿಗಳು ಸ್ಥಳಾಂತರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.