ADVERTISEMENT

ಚಿನ್ನ ಕಳ್ಳ ಸಾಗಣೆ: ಇಂಡಿಗೊ, ಸ್ಪೈಸ್‌ಜೆಟ್‌ ಸಿಬ್ಬಂದಿ ಭಾಗಿ, ಬಂಧನ

ಪಿಟಿಐ
Published 24 ಜುಲೈ 2021, 11:32 IST
Last Updated 24 ಜುಲೈ 2021, 11:32 IST
.
.   

ನವದೆಹಲಿ: ಅಕ್ರಮವಾಗಿ ಚಿನ್ನ ಕಳ್ಳ ಸಾಗಣೆ ಮಾಡಿದ ಆರೋಪದ ಮೇಲೆ ಇಂಡಿಗೊ ಮತ್ತು ಸ್ಪೈಸ್‌ಜೆಟ್‌ ಏರ್‌ಲೈನ್ಸ್‌ನ ನಾಲ್ವರು ಸಿಬ್ಬಂದಿ ಸೇರಿದಂತೆ ಏಳು ಮಂದಿಯನ್ನು ಕಸ್ಟಮ್ಸ್‌ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ಆರೋಪಿಗಳು ಸೌದಿ ಅರೇಬಿಯಾದ ಜೆಡ್ಡಾದಿಂದ ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಇವರನ್ನು ಬಂಧಿಸಲಾಗಿದೆ. ₹72.46 ಲಕ್ಷ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ದೇಶದಲ್ಲಿ ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಪ್ರಯಾಣಿಕರ ಬ್ಯಾಗ್‌ಗಳನ್ನು ತಪಾಸಣೆ ನಡೆಸಿದಾಗ ಚಿನ್ನದ ₹22 ಲಕ್ಷ ಮೌಲ್ಯದ 517.2 ಗ್ರಾಂ ತೂಕದ ಬಿಸ್ಕತ್‌ ಮತ್ತು ಎರಡು ತುಣುಕುಗಳು ಪತ್ತೆಯಾದವು. ಹೆಚ್ಚಿನ ತನಿಖೆ ನಡೆಸಿದಾಗ ಒಬ್ಬ ಪ್ರಯಾಣಿಕ 160 ಗ್ರಾಂ ತೂಕದ ಚಿನ್ನವನ್ನು ಇಂಡಿಗೊ ಏರ್‌ಲೈನ್ಸ್‌ ಸಿಬ್ಬಂದಿಯೊಬ್ಬರಿಗೆ ನೀಡಿರುವುದು ಪತ್ತೆಯಾಯಿತು. ಕಾರ್ಯಾಚರಣೆ ಬಳಿಕ, ಉಳಿದ ಚಿನ್ನವನ್ನು ವಶಪಡಿಸಿಕೊಳ್ಳಲಾಯಿತು. ಈ ಜಾಲದಲ್ಲಿ ಭಾಗಿಯಾಗಿರುವುದಾಗಿ ಸ್ಪೈಸ್‌ಜೆಟ್‌ ಮತ್ತು ಇಂಡಿಗೊ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಎಲ್ಲ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್‌ ಇಲಾಖೆ ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.