ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಮಂದೂರ ಸೇನಾ ಶಿಬಿರದ ಬಳಿ ಮಾರ್ಚ್ 1ರಂದು ನಡೆದಿದ್ದ ಗ್ರೆನೆಡ್ ದಾಳಿ ಪ್ರಕರಣವನ್ನು ಸೋಮವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭೇದಿಸಿದ್ದು, ಈ ಸಂಬಂಧ ಲಷ್ಕರ್–ಎ–ತೈಬಾ ಸಂಘಟನೆಯ ನಾಲ್ವರು ಸಹಚರರನ್ನು ಬಂಧಿಸಿದ್ದಾರೆ.
ಹಫೂ ತ್ರಾಲ್ ನಿವಾಸಿಗಳಾದ ಅಖಿಬ್ ಮನ್ಸೂರ್ ಭಟ್, ಮುದಾಸಿರ್ ಅಹ್ಮದ್ ಭಟ್, ಗುಲಾಂ ಮೊಹ್ಮದ್ ಅಹಂಗರ್, ತ್ರಾಲ್‌ನ ಶೇಖ್ ಮೊಹಲ್ಲಾದ ನಿವಾಸಿ ವಾರಿಸ್ ಬಷೀರ್ ನಜರ್ ಬಂಧಿತ ಆರೋಪಿಗಳು. ‘ಮಾರ್ಚ್ 1ರಂದು ಆವಂತಿಪೋರಾ ಸಮೀಪದ ಮಂದೂರ ಸೇನಾ ಶಿಬಿರದ ಬಳಿ ಆರೋಪಿ ವಾರಿಸ್ ಬಷೀರ್ ನಜರ್ ಗ್ರೆನೆಡ್ ಎಸೆದು ಪರಾರಿಯಾಗಿದ್ದ. ಈತನಿಂದ ಮೂರು ಹ್ಯಾಂಡ್ ಗ್ರೆನೆಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಸದ್ಯ ಶ್ರೀನಗರದ ಜೈಲಿನಲ್ಲಿರುವ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಇರ್ಷಾದ್ ಅಹ್ಮದ್ ಭಟ್ ಸೂಚನೆ ಮೇರೆಗೆ ಬಂಧಿತರೆಲ್ಲರೂ ಗ್ರೆನೆಡ್ ದಾಳಿ ನಡೆಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.