ADVERTISEMENT

ಪಠಾಣ್‌ಕೋಟ್‌ ಸಮೀಪ ಟ್ಯಾಕ್ಸಿ ಹೈಜಾಕ್‌; ಜಮ್ಮುಕಾಶ್ಮೀರ, ಪಂಜಾಬ್‌ ಕಟ್ಟೆಚ್ಚರ

ನಾಲ್ಕು ಮಂದಿ ಬಂದೂಕುದಾರಿಗಳಿಂದ ಕಾರು ವಶ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 11:47 IST
Last Updated 14 ನವೆಂಬರ್ 2018, 11:47 IST
ಬಿಎಸ್‌ಎಫ್‌ ಯೋಧರು–ಸಂಗ್ರಹ ಚಿತ್ರ
ಬಿಎಸ್‌ಎಫ್‌ ಯೋಧರು–ಸಂಗ್ರಹ ಚಿತ್ರ   

ಜಮ್ಮು: ಜಮ್ಮು ರೈಲ್ವೆ ನಿಲ್ದಾಣದಲ್ಲಿ ಟ್ಯಾಕ್ಸಿ ಬಾಡಿಗೆ ಪಡೆದ ನಾಲ್ಕು ಮಂದಿ ಬಂದೂಕು ತೋರಿಸಿ ಟ್ಯಾಕ್ಸಿ ವಶಕ್ಕೆ ಪಡೆದಿದ್ದು, ಪಂಜಾಬ್‌ನ ಪಠಾಣ್‌ಕೋಟ್‌ ಮತ್ತು ಜಮ್ಮು–ಕಾಶ್ಮೀರದ ಕಥುವಾ ಪ್ರದೇಶದಲ್ಲಿ ಕಟ್ಟೆಚ್ಚರಿಕೆ ವಹಿಸಲಾಗಿದೆ.

ಮಂಗಳವಾರ ರಾತ್ರಿ ಬೆಳ್ಳಿ ಬಣ್ಣದ ಇನೋವಾ ಟ್ಯಾಕ್ಸಿ ಬಾಡಿಗೆ ಪಡೆದಿರುವ ನಾಲ್ಕು ಮಂದಿ ಮಾಧೋಪುರ್ ಸಮೀಪ ಟ್ಯಾಕ್ಸಿ ತಮ್ಮ ವಶಕ್ಕೆ ಪಡೆದಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. ಕಾರಿನ ನೋಂದಣಿ ಸಂಖ್ಯೆ ಜೆಕೆ02ಎಡಬ್ಲ್ಯೂ–0922 ಎಂದು ಗುರುತಿಸಲಾಗಿದೆ.

ಈ ಬಗ್ಗೆ ರೈಲ್ವೆ ನಿಲ್ದಾಣದ ಟ್ಯಾಕ್ಸಿ ಸಂಘದ ಉಪಾಧ್ಯಕ್ಷ ರಜವಿಂದರ್‌ ಸಿಂಗ್‌ ಪ್ರತಿಕ್ರಿಯಿಸಿದ್ದು, ’ಪಠಾಣ್‌ಕೋಟ್‌ನ ಮೇಜರ್‌ ಸರ್ವಜೀತ್‌ ಸಿಂಗ್‌ ಹೆಸರಿನಲ್ಲಿ ಟ್ಯಾಕ್ಸಿ ಬುಕ್‌ ಮಾಡಲಾಗಿದೆ. ಮಂಕಿ ಕ್ಯಾಪ್‌ ಧರಿಸಿದ್ದ ನಾಲ್ಕು ಮಂದಿ ಇರುವುದು ನಮ್ಮ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ’ ಎಂದಿದ್ದಾರೆ.

ADVERTISEMENT

ಟ್ಯಾಕ್ಸಿ ಬಾಡಿಗೆಗೆ ಪಡೆಯುವುದಕ್ಕೂ ಮುನ್ನ ಸ್ಥಳ ಪರಿಶೀಲನೆ ನಡೆಸಿದ್ದಾರೆ ಹಾಗೂ ₹3,550 ಮುಂಗಡ ಹಣ ನೀಡಿರುವುದಾಗಿ ಸಿಂಗ್‌ ತಿಳಿಸಿದ್ದಾರೆ. ’ಕಥುವಾದಲ್ಲಿ ಊಟಕ್ಕಾಗಿ ಟ್ಯಾಕ್ಸಿ ನಿಲ್ಲಿಸಿದ್ದಾರೆ. ಲಖಾನ್‌ಪುರ್ ಸುಂಕದಕಟ್ಟೆ ಸಮೀಪಿಸುತ್ತಿದ್ದಂತೆ, ತಾವು ಸೇನೆಯಲ್ಲಿರುವುದರಿಂದ ಸುಂಕ ಕಟ್ಟುವುದರಿಂದ ವಿನಾಯಿತಿಯಿದೆ ಎಂದು ಚಾಲಕ ರಾಜ್‌ ಕುಮಾರ್‌ಗೆ ಹೇಳಿದ್ದಾರೆ. ಟ್ಯಾಕ್ಸಿ ಮಾಧೋಪುರ್‌ ತಲುಪುತ್ತಿದ್ದಂತೆ ರಾಜ್‌ ಕುಮಾರ್‌ಗೆ ಬಂದೂಕು ತೋರಿಸಿ ಕೊಲ್ಲುವುದಾಗಿ ಹೆದರಿಸಿದ್ದಾರೆ. ಕೊನೆಗೆ ಚಾಲಕನನ್ನು ಬಿಟ್ಟು ಕಾರು ಚಲಾಯಿಸಿಕೊಂಡು ಹೊರಟಿದ್ದಾರೆ’ ಎಂದು ಸಿಂಗ್‌ ಘಟನೆ ವಿವರ ನೀಡಿದ್ದಾರೆ.

ಚಾಲಕ ಸಮೀಪದ ಪೊಲೀಸ್‌ ಚೌಕಿ ಸಂಪರ್ಕಿಸಿದ್ದು, ಆತನನ್ನು ಸುಜಾನ್‌ಪುರ್‌ ಪೊಲೀಸ್‌ ಠಾಣೆಗೆ ಕರೆತರಲಾಗಿದೆ. ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಮಾತನಾಡುವಂಥ ಪಂಜಾಬಿ ಶೈಲಿಯಲ್ಲಿ ನಾಲ್ಕೂ ಮಂದಿ ಮಾತನಾಡುತ್ತಿರುವುದಾಗಿ ಚಾಲಕ ರಾಜ್‌ ತಿಳಿಸಿದ್ದಾರೆ.

ಪಠಾಣ್‌ಕೋಟ್‌ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಶೀಘ್ರದಲ್ಲಿ ಕಾರು ಪತ್ತೆಮಾಡಿ, ನಾಲ್ಕೂ ಜನರನ್ನು ಬಂಧಿಸಲು ಕ್ರಮವಹಿಸಲಾಗಿದೆ ಎಂದು ಕಥುವಾದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

2016ರ ಕರಾಳ ನೆನಪು

2016ರಲ್ಲಿ ಉಗ್ರರು ಟ್ಯಾಕ್ಸಿ ಹೈಜಾಕ್‌ ಮಾಡಿ, ಅಲ್ಲಿಂದ ಪಂಜಾಬ್‌ ಪೊಲೀಸ್‌ ಎಸ್‌ಪಿ ವಾಹನ ವಶಪಡಿಸಿಕೊಂಡು ಪಠಾಣ್‌ಕೋಟ್‌ ವಾಯುನೆಲೆ ಮೇಲೆ ದಾಳಿ ನಡೆಸಿದ್ದರು. ಉಗ್ರರನ್ನು ಸದೆಬಡೆಯಲು 12 ಗಂಟೆಗಳ ಕಾರ್ಯಾಚರಣೆ ನಡೆಸಲಾಗಿತ್ತು. ಈ ದಾಳಿಯಲ್ಲಿ ಹತ್ತು ಮಂದಿ ಮೃತಪಟ್ಟಿದ್ದರು. ಉಗ್ರರಿಂದ ಎರಡು ಜಿಪಿಎಸ್‌ ಸಾಧನಗಳು ಹಾಗೂ ರಾತ್ರಿ ಸಮಯ ಕಾಣಲು ಸಹಕಾರಿಯಾಗುವ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಶಸ್ತ್ರಧಾರಿಗಳಾಗಿದ್ದ ಎಲ್ಲ ಉಗ್ರರು ಯೋಧರ ಗುಂಡಿಗೆ ಬಲಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.