ADVERTISEMENT

ಮಾನವ ಕಳ್ಳಸಾಗಣೆ: ನಾಲ್ವರು ತೆಲುಗು ಭಾಷಿಕರ ವಿರುದ್ಧ ಬಂಧನ ವಾರಂಟ್‌

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 16:25 IST
Last Updated 9 ಜುಲೈ 2024, 16:25 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹೈದರಾಬಾದ್‌: ಮಾನವ ಕಳ್ಳಸಾಗಣೆ ಆರೋಪದ ಮೇಲೆ ಅಮೆರಿಕದ ಉತ್ತರ ಟೆಕ್ಸಾಸ್‌ನಲ್ಲಿ ನೆಲೆಸಿರುವ ನಾಲ್ವರು ತೆಲುಗು ಭಾಷಿಕರ ವಿರುದ್ಧ ಪೊಲೀಸರು ಸೋಮವಾರ ಬಂಧನ ವಾರಂಟ್‌ ಹೊರಡಿಸಿದ್ದಾರೆ.

ಸಂತೋಷ್‌ ಕಟ್ಕೂರಿ (31), ದ್ವಾರಕಾ ಗುಂಡ (31), ಚಂದನ್‌ ದಾಸೀರೆಡ್ಡಿ (24) ಮತ್ತು ಅನಿಲ್‌ ಮಾಳೆ (37) ವಿರುದ್ಧ ವಾರಂಟ್‌ ಹೊರಡಿಸಲಾಗಿದೆ.

ADVERTISEMENT

ಸಂತೋಷ್‌, ದ್ವಾರಕಾ ಮತ್ತು ಚಂದನ್‌ ಮೆಲಿಸ್ಸಾ ನಿವಾಸಿಗಳು ಮತ್ತು ಅನಿಲ್ ಪ್ರಾಸ್ಫರ್‌ನ ನಿವಾಸಿ.

ಅನುಮಾನಾಸ್ಪದ ಚಟುವಟಿಕೆ ಮತ್ತು ಮಾನವ ಕಳ್ಳಸಾಗಾಣಿಕೆ ವಿರುದ್ಧದ ಧ್ವನಿಗೆ ಪ್ರತಿಯಾಗಿ ‘1000 ಗಿನ್ಸ್‌ಬರ್ಗ್‌ ಲೇನ್‌’ ಪ್ರದೇಶಕ್ಕೆ  ಕಳೆದ ಮಾರ್ಚ್‌ 13ರಂದು ಅಧಿಕಾರಿಗಳ ತಂಡವನ್ನು ಕಳುಹಿಸಲಾಗಿತ್ತು ಎಂದು ಪ್ರಿನ್ಸ್‌ಟನ್‌ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಾಥಮಿಕ ವರದಿ ಬಳಿಕ ಪ್ರಿನ್ಸ್‌ಟನ್‌ ಪೊಲೀಸರು ಸಂತೋಷ್‌ ಕಟ್ಕೂರಿ ಅವರ ಮನೆಯಲ್ಲಿ ಶೋಧ ನಡೆಸಿದ್ದರು. ಈ ಸಂದರ್ಭದಲ್ಲಿ 15 ಮಂದಿ ವಯಸ್ಕ ಮಹಿಳೆಯರು ಅಲ್ಲಿ ಇದ್ದರು. ಶೋಧದ ವೇಳೆ ಹಲವು ಲ್ಯಾಪ್‌ಟಾಪ್‌, ಫೋನ್‌ಗಳು, ಪ್ರಿಂಟರ್‌ಗಳು ಮತ್ತು ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು.

ಕಟ್ಕೂರಿ ಮತ್ತು ಹಲವು ಶೆಲ್‌ ಕಂಪನಿಗಳ ಪರವಾಗಿ ಕೆಲಸ ಮಾಡಲು ಮಹಿಳೆಯರನ್ನು ಒತ್ತಾಯಪೂರ್ವಕವಾಗಿ ಕರೆತರಲಾಗಿತ್ತು ಎಂಬುದು ತನಿಖೆ ವೇಳೆ ಪತ್ತೆಯಾಗಿತ್ತು. 

ಬೇರೆ ಕಡೆಗಳಲ್ಲಿ ನಡೆದ ಶೋಧದಲ್ಲಿ ಮತ್ತಷ್ಟು ಲ್ಯಾಪ್‌ಟಾಪ್‌, ಫೋನ್‌ ಮತ್ತು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲಾ ಸಾಧನಗಳನ್ನು ಪರೀಕ್ಷೆಗೆ ಒಳಪಡಿಸಿ ಆರೋಪ ದೃಢಪಟ್ಟ ನಂತರ ಬಂಧನ ವಾರಂಟ್‌ ಹೊರಡಿಸಲಾಗಿದೆ.

ವರದಿಗಳ ಪ್ರಕಾರ, ಹೀಗೆ ಕರೆತಂದ ಮಹಿಳೆಯರನ್ನು ನೆಲದ ಮೇಲೆ ಮಲಗಿಸಲಾಗುತ್ತದೆ. ಒಂದು ಕೋಣೆಯಲ್ಲಿ ಮೂರರಿಂದ ಐವರು ಮಹಿಳೆಯರು ಇರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.