ಕೊಚ್ಚಿ: ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನಕ್ಕಾಗಿ ಎರಡು ದಿನ ಮಹಿಳೆಯರಿಗೆ ಮೀಸಲಿಡಿ ಎಂದು ಕೇರಳ ಸರ್ಕಾರ ಹೈಕೋರ್ಟ್ ನಲ್ಲಿ ಹೇಳಿದೆ. ಶಬರಿಮಲೆಯಲ್ಲಿ ಮಹಿಳೆಯರಿಗೆ ಅಯ್ಯಪ್ಪ ದರ್ಶನ ಪಡೆಯಲು ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ನಾಲ್ವರು ಮಹಿಳೆಯರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.ಈ ಅರ್ಜಿಯ ವಿಚಾರಣೆ ವೇಳೆ ಕೇರಳ ಸರ್ಕಾರ ಅಯ್ಯಪ್ಪ ದರ್ಶನಕ್ಕಾಗಿ ಮಹಿಳೆಯರಿಗೆ ಎರಡು ದಿನ ಮೀಸಲಿಡಿ ಎಂದು ಹೈಕೋರ್ಟ್‌ಗೆಹೇಳಿದೆ.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಶಬರಿಮಲೆಯಲ್ಲಿ ಮಹಿಳೆಯರು ಅಯ್ಯಪ್ಪ ದರ್ಶನ ಪಡೆಯುವುದಕ್ಕಾಗಿ ಸೌಕರ್ಯಗಳನ್ನು ಏರ್ಪಡಿಸಿದ್ದೀರಾ? ಮಹಿಳೆಯರಿಗೆ ಪ್ರತ್ಯೇಕ ಸೌಕರ್ಯ ಏರ್ಪಡಿಸಲು ಎಷ್ಟು ಕಾಲಾವಕಾಶ ಬೇಕು? ಎಂದು ದೇವಸ್ವಂ ಮಂಡಳಿಯನ್ನು ಪ್ರಶ್ನಿಸಿದೆ.
ಅರ್ಜಿಯಲ್ಲಿ ಏನಿದೆ?
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಮತ್ತು ಶಬರಿಮಲೆ ಕರ್ಮ ಸಮಿತಿ ಮೊದಲಾದ ಸಂಘಟನೆಗಳು ಅವರ ರಾಜಕೀಯ ಲಾಭಕ್ಕಾಗಿ ಶಬರಿಮಲೆಯಲ್ಲಿ ಸಂಘರ್ಷ ಸೃಷ್ಟಿಸುತ್ತಿದ್ದು, ಈ ಕಾರಣದಿಂದಾಗಿ ನಾವು ರಕ್ಷಣೆ ಬಯಸಿ ನ್ಯಾಯಾಲಯದ ಮೆಟ್ಟಿಲೇರಿದ್ದೇವೆ. ಇಂಥಾ ಪರಿಸ್ಥಿತಿಯಲ್ಲಿ ಶಬರಿಮಲೆಯಲ್ಲಿ ಮಹಿಳೆಯರಿಗಾಗಿ ಮಾತ್ರ ಎರಡು ಅಥವಾ ಮೂರು ದಿನ ಮೀಸಲಿಡಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಸೆಪ್ಟೆಂಬರ್ 28ಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ಪ್ರವೇಶ ಮಾಡಬಹುದು ಎಂದು ನ್ಯಾಯಾಲಯ ತೀರ್ಪು ನೀಡಿದ ನಂತರ ಕಪ್ಪು ಬಟ್ಟೆ ಧರಿಸಿ ಸಂಪ್ರದಾಯ ಪ್ರಕಾರ ವ್ರತಾಚರಣೆ ಮಾಡಿದವರು ನಾವು. ಅಯ್ಯಪ್ಪ ಭಕ್ತರಾದ ನಮಗೆ ದೇವರ ದರ್ಶನ ಮಾಡಲಿರುವ ಸೌಕರ್ಯ ಒದಗಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.