ADVERTISEMENT

ಪತ್ರಕರ್ತರ ಬಟ್ಟೆ ಬಿಚ್ಚಿಸಿದ ಮಧ್ಯ ಪ್ರದೇಶ ಪೊಲೀಸ್‌: ರಾಹುಲ್‌ ಗಾಂಧಿ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಏಪ್ರಿಲ್ 2022, 7:55 IST
Last Updated 8 ಏಪ್ರಿಲ್ 2022, 7:55 IST
ಮಧ್ಯ ಪ್ರದೇಶದ ಪೊಲೀಸ್ ಠಾಣೆಯೊಂದರಲ್ಲಿ ಪತ್ರಕರ್ತರ ಬಟ್ಟೆ ಬಿಚ್ಚಿಸಿ, ಒಳಉಡುಪಿನಲ್ಲಿ ನಿಲ್ಲಿಸಿರುವುದು
ಮಧ್ಯ ಪ್ರದೇಶದ ಪೊಲೀಸ್ ಠಾಣೆಯೊಂದರಲ್ಲಿ ಪತ್ರಕರ್ತರ ಬಟ್ಟೆ ಬಿಚ್ಚಿಸಿ, ಒಳಉಡುಪಿನಲ್ಲಿ ನಿಲ್ಲಿಸಿರುವುದು   

ನವದೆಹಲಿ: ಮಧ್ಯ ಪ್ರದೇಶದ ಪೊಲೀಸ್‌ ಠಾಣೆಯೊಂದರಲ್ಲಿ ಪತ್ರಕರ್ತರ ಬಟ್ಟೆ ಬಿಚ್ಚಿಸಿ, ಒಳಉಡುಪಿನಲ್ಲಿ ನಿಲ್ಲಿಸಿರುವ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ಚಿತ್ರಗಳ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, 'ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವನ್ನು ಲಾಕ್‌ಅಪ್‌ನಲ್ಲಿ ಕಳಚಲಾಗಿದೆ' ಎಂದು ಟ್ವೀಟಿಸಿದ್ದಾರೆ.

ಪತ್ರಕರ್ತರನ್ನು ಅವಮಾನಿಸಿರುವುದಕ್ಕೆ ಮಧ್ಯ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರವು 'ಸತ್ಯಕ್ಕೆ ಬೆದರುತ್ತಿದೆ' ಎಂದಿದ್ದಾರೆ.

'ಸರ್ಕಾರದ ಮಡಿಲಲ್ಲಿ ಕುಳಿತು, ಅದರ ಗುಣಗಾನ ಮಾಡುತ್ತಿರಬೇಕು, ಇಲ್ಲವೇ ಜೈಲಿಗೆ ಹೋಗಬೇಕು. 'ಹೊಸ ಭಾರತದ' ಸರ್ಕಾರವು ಸತ್ಯಕ್ಕೆ ಹೆದರುತ್ತದೆ' ಎಂದು ರಾಹುಲ್‌ ಗಾಂಧಿ ಮಧ್ಯ ಪ್ರದೇಶ ಸರ್ಕಾರವನ್ನು ಟೀಕಿಸಿದ್ದಾರೆ.

ADVERTISEMENT

ಮಧ್ಯ ಪ್ರದೇಶದ ಸಿಧಿ ಜಿಲ್ಲೆಯಲ್ಲಿ ಏಪ್ರಿಲ್‌ 2ರಂದು ಈ ಘಟನೆ ನಡೆದಿದ್ದು, ಬಟ್ಟೆ ಕಳಚಿಟ್ಟು ನಿಂತಿರುವ ಪತ್ರಕರ್ತರ ಫೋಟೊಗಳು ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

ಬಿಜೆಪಿ ಶಾಸಕ ಕೇದಾರ್‌ನಾಥ್‌ ಶುಕ್ಲ ಮತ್ತು ಅವರ ಮಗ ಗುರು ದತ್ತ ವಿರುದ್ಧ ಕೆಟ್ಟದಾಗಿ ಮಾತನಾಡಿರುವ ಆರೋಪದ ಮೇಲೆ ಪೊಲೀಸರು ರಂಗಭೂಮಿ ಕಲಾವಿದ ನೀರಜ್‌ ಕುಂದರ್‌ ಅವರನ್ನು ಬಂಧಿಸಿದ್ದಾರೆ. ಕಲಾವಿದ ನೀರಜ್‌ರನ್ನು ಬಿಡುಗಡೆ ಮಾಡುವಂತೆ ಪತ್ರಕರ್ತರು ಮತ್ತು ಸಾಮಾಜಿಕ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದರು.

ಒಡಿಶಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ನಿರಂಜನ್‌ ಪಟ್ನಾಯಕ್‌ ಸಹ ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ಮಧ್ಯ ಪ್ರದೇಶ ಸರ್ಕಾರವನ್ನು ಟೀಕಿಸಿದ್ದು 'ಬಿಜೆಪಿ ಶಾಸಕರ ವಂಚನೆಯನ್ನು ಬಯಲಿಗೆಳೆದಿದ್ದಾರೆ, ಹಾಗಾಗಿ ಪೊಲೀಸರು ಪತ್ರಕರ್ತರ ಬಟ್ಟೆ ಕಳಚಿಸಿದ್ದಾರೆ' ಎಂದು ಆರೋಪಿಸಿದ್ದಾರೆ.

'ಪತ್ರಕರ್ತರಾಗಿ ಸತ್ಯಾಂಶವನ್ನು ವರದಿ ಮಾಡುವುದು ಅವರ ಕರ್ತವ್ಯವಾಗಿದೆ' ಎಂದು ಟ್ವೀಟಿಸಿದ್ದಾರೆ.

ಪೊಲೀಸ್‌ ಠಾಣೆಯ ಹಿರಿಯ ಅಧಿಕಾರಿ ಮನೋಜ್‌ ಸೋನಿ ಘಟನೆ ಸಂಬಂಧ ಪ್ರತಿಕ್ರಿಯಿಸಿದ್ದು, 'ಪರಿಶೀಲನೆಗಾಗಿ ಅವರ ಬಟ್ಟೆಗಳನ್ನು ಕಳಚಿಸಲಾಗಿತ್ತು ಹಾಗೂ ಅದು ಸಹ ಪ್ರಕ್ರಿಯೆಯಾಗಿದೆ...ಅವರನ್ನು ಪೊಲೀಸ್‌ ಠಾಣೆಯೊಳಗೆ ಥಳಿಸಿಲ್ಲ....' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.