ನವದೆಹಲಿ: ಫ್ರಾನ್ಸ್‌ನಿಂದ ರಫೇಲ್ ಯುದ್ಧವಿಮಾನ ಖರೀದಿ ವಿಷಯದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಪ್ಪು ಮಾಹಿತಿ ನೀಡಿದ್ದು, ದೇಶಕ್ಕೇ ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಎನ್‌ಡಿಎ ಸರ್ಕಾರದ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಯ ವೇಳೆ ಅವರು ಈ ಆರೋಪ ಮಾಡಿದರು. ಅದಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲೇ ತಿರುಗೇಟು ನೀಡಿದರು.
ಪ್ರತಿ ರಫೇಲ್ ವಿಮಾನದ ಬೆಲೆ ಎಷ್ಟು ಎಂಬುದನ್ನು ಬಹಿರಂಗ ಪಡಿಸುತ್ತೇನೆ ಎಂದು ರಕ್ಷಣಾ ಸಚಿವರು ಹೇಳಿದ್ದರು. ಆಮೇಲೆ ಭದ್ರತೆಯ ನೆಪವೊಡ್ಡಿ ಮಾಹಿತಿಯನ್ನು ಮುಚ್ಚಿಟ್ಟರು ಎಂದು ರಾಹುಲ್ ಆರೋಪಿಸಿದ್ದಾರೆ.
‘ಮಾಹಿತಿ ಬಹಿರಂಗಪಡಿಸಬಾರದು ಎಂಬ ಷರತ್ತಿಗೆ ಯುಪಿಎ ಸರ್ಕಾರವೇ ಒಪ್ಪಿಗೆ ಸೂಚಿಸಿದೆ’ ಎಂದು ನಿರ್ಮಲಾ ಸೀತಾರಾಮನ್ 2008ರ ಒಪ್ಪಂದದ ಪ್ರತಿಯನ್ನು ಪ್ರದರ್ಶಿಸಿದರು. ‘ಆ ಷರತ್ತುಗಳನ್ನು ನಾವೂ ಮುಂದುವರಿಸಿದ್ದೇವೆ’ ಎಂದು ಅವರು ಹರಿಹಾಯ್ದರು.
ಈ ವಿಚಾರ ವ್ಯಾಪಕವಾಗಿ ಚರ್ಚೆಗೆ ಬರುತ್ತಿದ್ದಂತೆ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಸ್ಪಷ್ಟನೆ ಹೊರಡಿಸಿದೆ. ರಾಹುಲ್ ಅವರ ಪ್ರತಿಪಾದನೆಗಿಂತ ವ್ಯತಿರಿಕ್ತವಾದ ಸ್ಪಷ್ಟನೆಯನ್ನು ಫ್ರಾನ್ಸ್ ನೀಡಿದೆ. ಒಪ್ಪಂದದ ಸೂಕ್ಷ್ಮ ಅಂಶಗಳನ್ನು ಬಹಿರಂಗಪಡಿಸದಿರಲು ಎರಡು ರಾಷ್ಟ್ರಗಳೂ ಒಪ್ಪಿಕೊಂಡಿವೆ ಎಂದು ಫ್ರಾನ್ಸ್ ಹೇಳಿದೆ.
ಆದರೆ ವಿಮಾನದ ಬೆಲೆಯ ಮಾಹಿತಿ ‘ಒಪ್ಪಂದದ ಸೂಕ್ಷ್ಮ ಅಂಶಗಳ’ ಅಡಿ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಫ್ರಾನ್ಸ್ ಸ್ಪಷ್ಟಪಡಿಸಿಲ್ಲ.
ಫ್ರಾನ್ಸ್‌ನ ಸ್ಪಷ್ಟನೆಗೆ ರಾಹುಲ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ‘ಯಾವುದೇ ಮಾಹಿತಿಯನ್ನು ರಹಸ್ಯವಾಗಿಟ್ಟುಕೊಳ್ಳಬೇಕು ಎಂಬ ಷರತ್ತು ಇಲ್ಲ ಎಂದು ಫ್ರಾನ್ಸ್ ಅಧ್ಯಕ್ಷರೇ ಹೇಳಿದ್ದರು. ಅವರು ಹೇಳಿದ್ದನ್ನು ನಿರಾಕರಿಸಬೇಕು ಎಂದು ಅವರಿಗೆ ಅನ್ನಿಸುತ್ತಿದ್ದರೆ, ನಿರಾಕರಿಸಲಿ ಬಿಡಿ’ ಎಂದು ರಾಹುಲ್ ಪ್ರತಿಕ್ರಿಯಿಸಿದರು.
ಸರ್ಕಾರದ ವಿರುದ್ಧ ವಾಗ್ದಾಳಿ:ದೇಶದ ಶ್ರೀಮಂತ ಉದ್ಯಮಿಗಳ ₹2.50 ಲಕ್ಷ ಕೋಟಿ ಸಾಲವನ್ನು ಪ್ರಧಾನಿ ಮನ್ನಾ ಮಾಡಿದ್ದಾರೆ. ಆದರೆ, ರೈತರ ಅಲ್ಪ ಸಾಲವನ್ನು ಮನ್ನಾ ಮಾಡದೆ ಕಡೆಗಣಿಸಿದ್ದಾರೆ ಎಂದು ಅವರು ಜರೆದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜೈ ಶಾ ಅವರ ಆಸ್ತಿಯು 16,000 ಪಟ್ಟು ಹೆಚ್ಚಿದರೂ ಪ್ರತಿಕ್ರಿಯೆ ನೀಡದ ಮೋದಿ ಈ ದೇಶದ ಕಾವಲುಗಾರ (ಚೌಕಿದಾರ) ಅಲ್ಲ. ಬದಲಿಗೆ, ಭ್ರಷ್ಟಾಚಾರದ ಪಾಲುದಾರ ಎಂದು ಆರೋಪಿಸಿದರು.
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹ 15 ಲಕ್ಷ ಜಮಾ ಮಾಡುವ, ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಮೋದಿ ಅವರ ಘೋಷಣೆ ಕೇವಲ ಘೋಷಣೆಯಾಗಿ ಉಳಿದಿದೆ. ಸರ್ಕಾರವೇ ಹೇಳಿರುವಂತೆ, ಕಳೆದ ವರ್ಷ ದೇಶದಲ್ಲಿ ಕೇವಲ 4 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳದ ಮೋದಿ ಪಕೋಡಾ ಮಾರಾಟ ಮಾಡುವಂತೆ ಯುವಕರಿಗೆ ಕರೆ ನೀಡುತ್ತಿದ್ದಾರೆ ಎಂದು ಅವರು ಮೂದಲಿಸಿದರು.
ವಿದೇಶಕ್ಕೆ ತೆರಳುವ ಪ್ರಧಾನಿಗೆ ಬಡವರು, ಸಣ್ಣಪುಟ್ಟ ವ್ಯಾಪಾರಿಗಳ ಕಷ್ಟ ಅರ್ಥವಾಗುವುದಿಲ್ಲ. ಬಡ ರೈತರು ಸೂಟು ಬೂಟು ಧರಿಸುವುದಿಲ್ಲ ಎಂಬ ಕಾರಣದಿಂದಲೇ ಹಣಕಾಸು ಸಚಿವರೂ ಕೃಷಿ ಸಾಲ ಮನ್ನಾ ಮಾಡುವುದು ಅಸಾಧ್ಯ ಎಂಬ ಹೇಳಿಕೆ ನೀಡಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಮಹಿಳೆಯರ ಮೇಲಿನ ಅತ್ಯಾಚಾರ, ಮಕ್ಕಳ ಕಳ್ಳರ ಹೆಸರಿನಲ್ಲಿ ನಿತ್ಯವೂ ನಾಗರಿಕರ ಮೇಲೆ ಹಲ್ಲೆ ಪ್ರಕರಣಗಳು ದೇಶದಾದ್ಯಂತ ಹೆಚ್ಚುತ್ತಿವೆ. ಈ ಹಲ್ಲೆಯು ಸಂವಿಧಾನ ಮತ್ತು ಸಂಸತ್ತಿನ ಮೇಲೆ ನಡೆಯುತ್ತಿರುವ ಹಲ್ಲೆಯಾಗಿದೆ. ಆದರೂ ಪ್ರಧಾನಿ ತುಟಿ ಬಿಚ್ಚದೆ ಮೌನವಾಗಿದ್ದಾರೆ. ತಮ್ಮದೇ ಸಂಪುಟದ ಸಚಿವರೊಬ್ಬರು ಸಂವಿಧಾನವನ್ನು ಬದಲಿಸುವ ಹೇಳಿಕೆ ನೀಡಿದರೂ ಅವರಿಗೆ ಬುದ್ದಿ ಮಾತು ಹೇಳುತ್ತಿಲ್ಲ ಎಂದು ಅವರು ದೂರಿದರು.
***
ಎಚ್‌ಎಎಲ್‌ನಿಂದ ಕಸಿದುಕೊಂಡಿದ್ದೇಕೆ?
ರಫೇಲ್ ಗುತ್ತಿಗೆಯನ್ನು ಎಚ್‌ಎಎಲ್‌ನಿಂದ ಕಸಿದುಕೊಂಡು ಯಾವುದೋ ಒಬ್ಬ ಉದ್ಯಮಿಗೆ ಕೊಟ್ಟಿದ್ದು ಏಕೆ ಎಂಬುದನ್ನು ಪ್ರಧಾನಿ ಮೋದಿ ವಿವರಿಸಬೇಕು ಎಂದು ರಾಹುಲ್ ಒತ್ತಾಯಿಸಿದರು.
‘ಕೆಲವು ಜನರ ಜತೆ ಪ್ರಧಾನಿ ಹೊಂದಿರುವ ಸಂಬಂಧದ ಬಗ್ಗೆ ಎಲ್ಲರಿಗೂ ಅರಿವಿದೆ. ಪ್ರಧಾನಿ ಪರ ಪ್ರಚಾರಕ್ಕೆ ಎಷ್ಟು ಹಣ ಖರ್ಚು ಮಾಡಲಾಗುತ್ತದೆ ಮತ್ತು ಆ ಹಣವನ್ನು ಯಾರು ನೀಡುತ್ತಾರೆ ಎಂಬುದೂ ಎಲ್ಲರಿಗೂ ಗೊತ್ತಿದೆ. ಅಂತಹ ವ್ಯಕ್ತಿಗಳಲ್ಲೇ ಒಬ್ಬರಿಗೆ ರಫೇಲ್ ಗುತ್ತಿಗೆ ಸಿಕ್ಕಿದೆ. ಈ ಒಪ್ಪಂದದಿಂದಆ ಮಹಾಶಯನಿಗೆ ₹ 45,000 ಕೋಟಿ ಲಾಭವಾಗಿದೆ’ ಎಂದು ರಾಹುಲ್ ಆರೋಪಿಸಿದರು.
**
‘ರಫೇಲ್ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸುತ್ತೇನೆ’ ಎಂದು ರಕ್ಷಣಾ ಸಚಿವರು ಮೊದಲು ಹೇಳಿದ್ದರು. ನಂತರ ‘ಒಪ್ಪಂದದ ರಹಸ್ಯಗಳನ್ನು ಕಾಪಾಡಬೇಕು ಎಂಬ ಷರತ್ತು ಇದೆ. ಹೀಗಾಗಿ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ನುಣುಚಿಕೊಂಡರು. ಆದರೆ ನಾನು ಫ್ರಾನ್ಸ್ ಅಧ್ಯಕ್ಷರ ಜತೆ ಮಾತನಾಡಿದ್ದೆ. ‘ರಹಸ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ಯಾವುದೇ ಷರತ್ತುಒಪ್ಪಂದದಲ್ಲಿ ಇಲ್ಲ’ ಎಂದು ಅವರು ಹೇಳಿದರು. ಈ ವಿಚಾರದಲ್ಲಿ ರಕ್ಷಣಾ ಸಚಿವರು ಸುಳ್ಳು ಹೇಳಿರುವುದು ಸ್ಪಷ್ಟವಾಗಿದೆ.
– ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದ
**
ಒಪ್ಪಂದದ ವಿವರಗಳನ್ನು ಬಹಿರಂಗಪಡಿಸುವುದನ್ನು ನಿರ್ಬಂಧಿಸುವ ಷರತ್ತಿಗೆ 2008ರಲ್ಲಿ ಯುಪಿಎ ಸರ್ಕಾರವೇ ಒಪ್ಪಿಗೆ ಸೂಚಿಸಿವೆ. ಆಗ ರಕ್ಷಣಾ ಸಚಿವರಾಗಿದ್ದ ಎ.ಕೆ.ಆಂಟನಿ ಅವರೇ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದಾರೆ. ಒಪ್ಪಂದ ಪತ್ರದ ಪ್ರತಿಯನ್ನು ನೋಡಿ. ‘ರಫೇಲ್ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸುವಂತಿಲ್ಲ. ಆ ವಿವರಗಳು ಬಹಿರಂಗವಾದರೆ, ನಮ್ಮ ದೇಶದ ಕಂಪನಿಗೆ ಜಾಗತಿಕ ಪ್ರತಿಸ್ಪರ್ಧಿಗಳನ್ನು ಎದುರಿಸುವುದು ಕಷ್ಟವಾಗುತ್ತದೆ’ ಎಂದು ಫ್ರಾನ್ಸ್ ಅಧ್ಯಕ್ಷರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
– ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವೆ
**
ಒಪ್ಪಂದದ ಸೂಕ್ಷ್ಮ ಅಂಶಗಳ ರಹಸ್ಯ ಕಾಪಾಡಿಕೊಳ್ಳುವ ಷರತ್ತಿಗೆ ಎರಡು ದೇಶಗಳೂ 2008ರ ರಫೇಲ್ ಒಪ್ಪಂದದಲ್ಲೇ ಒಪ್ಪಿಗೆ ಸೂಚಿಸಿದ್ದವು. ಎರಡೂ ದೇಶಗಳ ಭದ್ರತೆ ದೃಷ್ಟಿಯಿಂದ ಮತ್ತು ಯುದ್ಧವಿಮಾನದ ಕಾರ್ಯಾಚರಣೆಗೆ ಧಕ್ಕೆಯಾಗದಿರಲಿ ಎಂಬ ಉದ್ದೇಶದಿಂದ ಆ ಷರತ್ತನ್ನು ರೂಪಿಸಲಾಗಿತ್ತು. ಆ ಷರತ್ತು 2016ರ ಸೆಪ್ಟೆಂಬರ್ 23ರಂದು ಮಾಡಿಕೊಂಡ ಒಪ್ಪಂದಕ್ಕೆ ಸಹಜವಾಗಿಯೇ ಅನ್ವಯವಾಗುತ್ತದೆ.
– ಫ್ರಾನ್ಸ್ ಸರ್ಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.