ನವದೆಹಲಿ: ಗಾಲ್ವನ್ ಕಣಿವೆಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ವಾತಾವರಣ ಶಮನವಾಗುವ ಮುನ್ನವೇ, ಚೀನಾ ಸೇನೆ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉತ್ತರಕ್ಕಿರುವ ದೆಪ್ಸಾಂಗ್ ಬಯಲು ಪ್ರದೇಶದುದ್ದಕ್ಕೂಬೀಡುಬಿಟ್ಟಿದೆ. ಇದು ಎಲ್‌ಎಸಿಯನ್ನು ಮುಂದೊತ್ತುವ ಮತ್ತು ವಿವಾದದ ಹುಯಿಲೆಬ್ಬಿಸುವಚೀನಾದ ಮತ್ತೊಂದು ಪ್ರಯತ್ನ ಎಂದು ಹೇಳಲಾಗಿದೆ. ಇದೇ ವೇಳೆ ಭಾರತವೂ ಸೇನಾ ನಿಯೋಜನೆಯನ್ನು ಹಂತಹಂತವಾಗಿ ಹೆಚ್ಚಿಸುತ್ತಿದೆ.
'ಲಡಾಖ್ ಪ್ರದೇಶದಲ್ಲಿ ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿ ಚೀನಾ ಆರ್ಟಿಲರಿ(ಫಿರಂಗಿ ಪಡೆ) ನಿಯೋಜಿಸಿದೆ. ಸುಮಾರು 40 ಕಿ.ಮೀ. ವ್ಯಾಪ್ತಿಗೆ ಶೆಲ್ ಹಾರಿಸಬಲ್ಲ ಸಾಮರ್ಥ್ಯ ಈ ಆರ್ಟಿಲರಿಗೆ ಇದೆ. ಇದರ ಜೊತೆಗೆ ಎಲ್‌ಎಸಿಯಲ್ಲಿ ಭಾರತದ ಸುಪರ್ದಿಯಲ್ಲಿರುವ ಮುಖ್ಯ ರಸ್ತೆಗಳನ್ನು ಗುರಿಯಾಗಿಸಿ ಟ್ಯಾಂಕ್‌ಗಳನ್ನೂ ಚೀನಾ ನಿಯೋಜಿಸಿದೆ' ಎಂದು 'ಮಕ್ಸಾರ್' ಏಜೆನ್ಸಿ ನೀಡಿರುವ ಉಪಗ್ರಹ ಆಧರಿತ ಚಿತ್ರಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ, ಹಿಂದೂಸ್ತಾನ್ ಟೈಮ್ಸ್, ಇಂಡಿಯಾ ಟುಡೆ ಸೇರಿದಂತೆ ಹಲವು ಜಾಲತಾಣಗಳುವರದಿ ಮಾಡಿದೆ.
'ಗಾಲ್ವನ್ ನದಿ ದಂಡೆ ಮತ್ತು ಕಣಿವೆಯಲ್ಲಿ ಚೀನಾದ ಸೇನಾಪಡೆಯ ನಿಯೋಜನೆ ಕಡಿಮೆಯಾಗಿಲ್ಲ' ಎಂಬ ವಿಶ್ಲೇಷಣೆಗಳು ಪ್ರಕಟವಾದ ನಂತರವೂ ಭಾರತೀಯ ಸೇನೆ ಮತ್ತು ವಿದೇಶಾಂಗ ಇಲಾಖೆ ಈವರೆಗೆ ಈ ವರದಿಗಳಿಗೆ ಪ್ರತಿಕ್ರಿಯೆ ನೀಡಿಲ್ಲ.
ಸಿದ್ಧತೆ, ಪರಿಶೀಲನೆ, ಸೂಚನೆ
ಜೂನ್ 15ದಂದು ಗಾಲ್ವನ್ ಕಣಿವೆ ಸಂಘರ್ಷಕ್ಕೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿದ್ದ ಚೀನಾ, ಭಾರತವು ದ್ವಿಪಕ್ಷೀಯ ಒಪ್ಪಂದ, ಅಂತರರಾಷ್ಟ್ರೀಯ ಕರಾರುಗಳನ್ನು ಉಲ್ಲಂಘಿಸಿ ಪ್ರಚೋದನೆ ನೀಡಿದೆ ಎಂದು ಆರೋಪಿಸಿತ್ತು. ಇದರ ಬೆನ್ನಿಗೇ ಪ್ರಕಟವಾಗಿರುವ ಉಪಗ್ರಹ ಚಿತ್ರಗಳು ಆತಂಕ ಮೂಡಿಸಿವೆ. ಭಾರತೀಯ ಸೇನೆಯೂ ಸಂಭಾವ್ಯ ಪರಿಸ್ಥಿತಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಗಾಲ್ವನ್ ಕಣಿವೆ ಸೇರಿದಂತೆಲಡಾಖ್‌ನ ವಿವಿಧೆಡೆಯ ಮುಂಚೂಣಿ ನೆಲೆಗಳಲ್ಲಿ ಸೈನಿಕರನ್ನು ಮಾತನಾಡಿಸಿರುವ ಭೂಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಇಂದು ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಸಚಿವರಿಗೆ ಪರಿಸ್ಥಿತಿಯ ಬಗ್ಗೆ ವಿವರಿಸಲಿದ್ದಾರೆ. ಪೂರ್ವ ಲಡಾಖ್‌ನ ಎಲ್ಲ 65 ಸ್ಥಳಗಳಲ್ಲಿ (ಪಾಯಿಂಟ್) ಗಸ್ತು ಬಿಗಿಗೊಳಿಸುವಂತೆ ಜನರಲ್ ನರವಣೆ ಯೋಧರಿಗೆ ಸೂಚಿಸಿದ್ದಾರೆ. ದೆಹಲಿಯಲ್ಲಿ ಇಂದು ನಡೆಯುವ ಉನ್ನತ ಮಟ್ಟದ ಸಭೆ ಇದೇ ಕಾರಣಕ್ಕೆ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಉಪಗ್ರಹ ಚಿತ್ರಗಳು ತೆರೆದಿಟ್ಟ ಸತ್ಯ
@detresfa ಎಂಬ ಟ್ವಿಟರ್ ಖಾತೆಯು ಜೂನ್ 22ರಂದು, ‘ಗಾಲ್ವನ್ ಕಣಿವೆ ಪ್ರದೇಶದಲ್ಲಿ ಸಂಘರ್ಷದ 48 ಗಂಟೆ ಬಳಿಕಸನ್ನಿವೇಶ ಹೀಗಿದೆ.ಜೂನ್ 18ರ ಚಿತ್ರ’ಎಂದು ಉಪಗ್ರಹ ಚಿತ್ರವೊಂದನ್ನು ಪ್ರಕಟಿಸಿತ್ತು.
ಅದೇ ಖಾತೆಯಿಂದ ಜೂನ್ 24ರಂದು ಪ್ರಕಟವಾಗಿದ್ದ ಟ್ವೀಟ್‌ನಲ್ಲಿ, ‘ಸಂಭಾವ್ಯ ಸನ್ನಿವೇಷಗಳನ್ನುಪರಿಗಣಿಸಿ ರಕ್ಷಣಾತ್ಮಕವಾಗಿ ಸಣ್ಣ ಗೋಡೆಗಳನ್ನು ಚೀನಾ ನಿರ್ಮಿಸಿದೆ. ಕಂದಕದಂತಹ ಪ್ರದೇಶಗಳಲ್ಲಿ ಈ ನಿರ್ಮಾಣಗಳು ಕಾಣುತ್ತವೆ’ ಎಂದು ತಿಳಿಸಲಾಗಿತ್ತು.
ಇಂದು ಪ್ರಕಟಿಸಿರುವ ಮತ್ತೊಂದು ಪೋಸ್ಟ್‌ನಲ್ಲಿ, ‘ಇಲ್ಲಿರುವ ಚಿತ್ರಗಳು (ಎಡದಿಂದ ಬಲಕ್ಕೆ) ಜೂನ್ 16, 18 ಮತ್ತು 22ರಂದು ಚೀನಾ ಮತ್ತು ಭಾರತ ಸೇನೆಗಳು ಗಾಲ್ವನ್ ಕಣಿವೆಯಲ್ಲಿ ಹೇಗೆ ಮುಂದುವರಿದಿವೆ ಎಂಬುದನ್ನು ವಿವರಿಸುತ್ತವೆ’ ಎಂದು ಪ್ರಕಟಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸೇನೆಯ ಮೂಲಗಳು,‘ಜೂನ್ 22ರಂದು ಸೇನಾ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ, ಎಲ್‌ಎಸಿಗೆ ಹತ್ತಿರವಿರುವ ಪ್ರದೇಶಗಳೂ ಸೇರಿದಂತೆ ಸೇನಾಪಡೆಗಳನ್ನು ಹಂತಹಂತವಾಗಿ ಹಿಂಪಡೆಯಲು ನಿರ್ಧರಿಸಲಾಗಿತ್ತು. ಆದಾಗ್ಯೂ, ಚೀನಾ ಪ್ರದೇಶದಲ್ಲಿ ಇಂಥ ನಿರ್ಮಾಣಗಳುಕಂಡು ಬಂದಿವೆ. ಭಾರತ ಭಾಗದಲ್ಲಿಅಲ್ಲ’ಎಂದು ತಿಳಿಸಿವೆ.
ಮಂಗಳವಾರ ಸುದೀರ್ಘ 11 ಗಂಟೆಗಳ ಕಾಲ ನಡೆದ ಸಭೆಯಲ್ಲಿಪೂರ್ವ ಲಡಾಖ್ ಪ್ರದೇಶದಲ್ಲಿ ಎಲ್ಲ ರೀತಿಯ ಕಾರ್ಯಾಚರಣೆಯನ್ನು ಹಂತಹಂತವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.