ಇಂಫಾಲ್: ಮಣಿಪುರದ ಜನಾಂಗೀಯ ಹಿಂಸಾಚಾರದಲ್ಲಿ ಮೃತಪಟ್ಟ ಕುಕಿ ಬುಡಕಟ್ಟಿನ 35 ಜನರ ಸಾಮೂಹಿಕ ಅಂತ್ಯಕ್ರಿಯೆ ನಡೆಸಲು ಉದ್ದೇಶಿಸಿರುವ ವಿವಾದಾತ್ಮಕ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಇಲ್ಲಿನ ಹೈಕೋರ್ಟ್ ಗುರುವಾರ ಆದೇಶಿಸಿದೆ. ಈ ಕುರಿತ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಹೈಕೋರ್ಟ್ ಸೂಚಿಸಿದೆ.
ಅಂತ್ಯಕ್ರಿಯೆ ಕಾರ್ಯಕ್ಕೂ ಕೆಲ ಗಂಟೆಗಳ ಮುನ್ನ ಈ ಆದೇಶ ಹೊರಬಿದ್ದಿದೆ. ಇದರ ಬೆನ್ನಲ್ಲೇ, ಸಾಮೂಹಿಕ ಅಂತ್ಯಕ್ರಿಯೆ ಕಾರ್ಯವನ್ನು ಮುಂದೂಡಿರುವುದಾಗಿ ಕುಕಿ ಸಮುದಾಯದ ಸಂಘಟನೆ ಐಟಿಎಲ್‌ಎಫ್ ಪ್ರಕಟಿಸಿದೆ.
ಚುರಚಂದಪುರ ಜಿಲ್ಲೆಯ ಹಾವೊಲೈ ಖೋಪಿ ಗ್ರಾಮದ ‘ಶಾಂತಿ ಮೈದಾನ’ದಲ್ಲಿ ಗುರುವಾರ ಸಾಮೂಹಿಕ ಅಂತ್ಯಕ್ರಿಯೆ ನಡೆಸಲು ಸಂಘಟನೆ ಯೋಜಿಸಿತ್ತು.
ಬೆಳಿಗ್ಗೆ 6ಕ್ಕೆ ನಡೆದ ವಿಚಾರಣೆ: ವಿವಾದಿತ ಭೂ ಪ್ರದೇಶದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆಯುವ ವಿಚಾರವಾಗಿ ರಾಜ್ಯದ ಹಲವೆಡೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ.ವಿ.ಮುರಳೀಧರನ್ ನೇತೃತ್ವದ ಪೀಠವು ಗುರುವಾರ ಬೆಳಿಗ್ಗೆ 6 ಗಂಟೆಗೆ ಈ ಕುರಿತ ಪಿಐಎಲ್‌ನ ತುರ್ತು ವಿಚಾರಣೆ ಕೈಗೆತ್ತಿಕೊಂಡಿತು.
ಈ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಕುಕಿ, ಮೈತೇಯಿ ಸಮುದಾಯದವರಿಗೆ,
ರಾಜ್ಯ, ಕೇಂದ್ರ ಸರ್ಕಾರ ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಹಾಗೂ ಸಾರ್ವಜನಿಕರಿಗೆ ನಿರ್ದೇಶನ ನೀಡಿದ ಪೀಠ, ಮುಂದಿನ ವಿಚಾರಣೆಯನ್ನು ಇದೇ 9ಕ್ಕೆ ನಿಗದಿಪಡಿಸಿತು.
ಈ ಸ್ಥಳದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆಸುವುದನ್ನು ವಿರೋಧಿಸಿ ಅಂತರರಾಷ್ಟ್ರೀಯ ಮೈತೇಯಿ ವೇದಿಕೆ ಬುಧವಾರ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿತ್ತು. ಇದನ್ನು ನ್ಯಾಯಮೂರ್ತಿಗಳಾದ ಎ.ಬಿಮೋಲ್ ಸಿಂಗ್ ಮತ್ತು ಎ.ಗುಣೇಶ್ವರ್ ಶರ್ಮಾ ಅವರಿದ್ದ ವಿಶೇಷ ಪೀಠ ವಿಚಾರಣೆ ನಡೆಸಬೇಕಿತ್ತು. ಆದರೆ ಬಿಮೋಲ್ ಸಿಂಗ್ ಅವರು ವೈಯಕ್ತಿಕ ಕಾರಣದಿಂದ ಹಿಂದೆ ಸರಿದರು. ಹೀಗಾಗಿ ಇದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ.ವಿ.ಮುರಳೀಧರನ್ ಮತ್ತು ಶರ್ಮಾ ಅವರ ಪೀಠಕ್ಕೆ ವರ್ಗಾವಣೆಯಾಯಿತು.
ಗೃಹ ಸಚಿವಾಲಯದ ಭರವಸೆ: ವಿವಾದಿತ ಪ್ರದೇಶದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕುರಿತು ಗೃಹ ಸಚಿವಾಲಯ ಭರವಸೆ ನೀಡಿದ ಕಾರಣ ಸಾಮೂಹಿಕ ಅಂತ್ಯಕ್ರಿಯೆ ಮುಂದೂಡಲು ನಿರ್ಧರಿಸಲಾಯಿತು ಎಂದು ಐಟಿಎಲ್‌ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
ಐಟಿಎಲ್‌ಎಫ್‌ನ ಐದು ಬೇಡಿಕೆಗಳು: ಅಂತ್ಯಕ್ರಿಯೆಗೆ ಉದ್ದೇಶಿಸಿರುವ ಸ್ಥಳವನ್ನು ಕಾನೂನು ಬದ್ಧಗೊಳಿಸಬೇಕು, ಇಂಫಾಲ್ ಆಸ್ಪತ್ರೆಯಲ್ಲಿರುವ ಕುಕಿ ಬುಡಕಟ್ಟಿನವರ ಶವಗಳನ್ನು ಹಸ್ತಾಂತರಿಸಬೇಕು, ಮಣಿಪುರದಿಂದ ಪ್ರತ್ಯೇಕಗೊಳ್ಳುವ ಪ್ರಕ್ರಿಯೆಯನ್ನು ವೇಗಗೊಳಿಸಬೇಕು ಮತ್ತು ಇಂಫಾಲ್ ಜೈಲಿನಲ್ಲಿರುವ ಕುಕಿ ಕೈದಿಗಳನ್ನು ಇತರ ರಾಜ್ಯಗಳಿಗೆ ವರ್ಗಾಯಿಸಬೇಕು ಎಂಬ ಐದು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿರುವುದಾಗಿ ಐಟಿಎಲ್‌ಎಫ್ ಹೇಳಿದೆ.
ಘರ್ಷಣೆ: 19 ಜನರಿಗೆ ಗಾಯ
ಮಣಿಪುರದ ಬಿಷ್ಣುಪುರ ಜಿಲ್ಲೆಯ ಕಾಂಗ್‌ವಯಿ ಮತ್ತು ಫೌಗಾಕಚಾವೊ ಪ್ರದೇಶದಲ್ಲಿ ಗುರುವಾರ ಬೀದಿಗಿಳಿದಿದ್ದ ಜನರ ಗುಂಪನ್ನು ಚದುರಿಸಲು ಸೇನೆ ಮತ್ತು ಆರ್‌ಎಎಫ್ ಸಿಬ್ಬಂದಿ ನಡೆಸಿದ ಅಶ್ರುವಾಯು ಶೆಲ್ ದಾಳಿಯಲ್ಲಿ 19 ಜನರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನಾಂಗೀಯ ಹಿಂಸಾಚಾರದಲ್ಲಿ ಮೃತಪಟ್ಟ 35 ಕುಕಿ ಬುಡಕಟ್ಟು ಜನರ ಸಾಮೂಹಿಕ ಅಂತ್ಯಕ್ರಿಯೆಯನ್ನು ಆಯೋಜಿಸಲಾಗಿದ್ದ ಚುರಚಂದಪುರಕ್ಕೆ ಹೊರಡಲು ಮಹಿಳೆಯರೂ ಸೇರಿದಂತೆ ಸಾವಿರಾರು ಜನರು ಬೀದಿಗಿಳಿದಿದ್ದರು.
ಮಹಿಳೆಯರೂ ಸೇರಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಸ್ಥಳೀಯರು ಸೇನೆ ಮತ್ತು ಆರ್‌ಎಎಫ್ ಸಿಬ್ಬಂದಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ದಾಟಲು ಪ್ರಯತ್ನಿಸಿದರು. ಮಹಿಳೆಯರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಿದರು. ಈ ವೇಳೆ ಗುಂಪನ್ನು ತಡೆಯಲು ಮತ್ತು ಚದುರಿಸಲು ಸೇನೆ, ಆರ್‌ಎಎಫ್ ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಇದು, ಮೈತೇಯಿ ಸಮುದಾಯದವರು ಹೆಚ್ಚಿರುವ ಇಂಫಾಲ್ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಿಸಿತು.
ಈ ಜಿಲ್ಲೆಗಳಲ್ಲಿ ಘೋಷಿಸಲಾಗಿದ್ದ ಕರ್ಫ್ಯೂ ಸಡಿಲಕೆಯನ್ನು, ಘರ್ಷಣೆಯ ಬೆನ್ನಲ್ಲೆ ಜಿಲ್ಲಾಧಿಕಾರಿಗಳು ಹಿಂಪಡೆದರು. ರಾಜ್ಯದ ವಿವಿಧೆಡೆ ಪೊಲೀಸರು 347 ಜನರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.