ADVERTISEMENT

Wayanad Landslides | ಎಲ್ಲಿದ್ದೇ ಇಲ್ಲೀತನಕ.. ಮತ್ತೆ ಒಂದುಗೂಡಿದ ಗೆಳೆಯರು

ಪಿಟಿಐ
Published 6 ಆಗಸ್ಟ್ 2024, 13:58 IST
Last Updated 6 ಆಗಸ್ಟ್ 2024, 13:58 IST
<div class="paragraphs"><p>ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದ ದೃಶ್ಯ</p></div>

ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದ ದೃಶ್ಯ

   

–ರಾಯಿಟರ್ಸ್ ಚಿತ್ರ

ವಯನಾಡ್: ಅದೊಂದು ಹೃದಯಸ್ಪರ್ಶಿ ಕ್ಷಣ. ನೂರಾರು ಜನರನ್ನು ಸಮಾಧಿಯಾಗಿಸಿದ ಭೂಕುಸಿತ ಅವಘಢದ ಸಂದರ್ಭದಲ್ಲಿ ಬೇರೆಯಾಗಿದ್ದ ಗೆಳೆಯರಿಬ್ಬರು ಮತ್ತೆ ಮುಖಾಮುಖಿಯಾದರು.

ADVERTISEMENT

ಭೂಕುಸಿತ ಅವಘಡದ ನಂತರ ಪರಸ್ಪರರ ಸ್ಥಿತಿ ಏನಾಗಿದೆ ಎಂದೇ ತಿಳಿದಿರಲಿಲ್ಲ. ಎಂಟು ದಿನದ ಬಳಿಕ ಮಂಗಳವಾರ ಎದುರಾದಾಗ ಇಬ್ಬರ ಕಣ್ಣಾಲಿಗಳೂ ತುಂಬಿದ್ದವು. ಇಬ್ಬರಲ್ಲೂ ಖುಷಿ ಮನೆಮಾಡಿತ್ತು.

‘ಅವನು ಇದ್ದಾನೋ, ಇಲ್ಲವೋ ಎಂದೇ ನನಗೆ ಗೊತ್ತಿರಲಿಲ್ಲ. ನಾನು ಬದುಕಿದ್ದೇನೆ ಎಂದು ಅವನಿಗೂ ಗೊತ್ತಿರಲಿಲ್ಲ’ ಎಂದು ತನ್ನನ್ನು ಭೇಟಿಯಾದ ಸುದ್ದಿಗಾರರಿಗೆ ಮುಜೀಬ್‌ ಪ್ರತಿಕ್ರಿಯಿಸಿದರು. 

‘ನಾನು, ಗೆಳೆಯ ಇಂದು ಪರಸ್ಪರ ಮುಖಾಮುಖಿ ಆದಂತೆ, ನನ್ನ ಎಲ್ಲ ನೆರೆಹೊರೆಯವರು ಮತ್ತೆ ಎದುರಾಗಲಿ, ಒಂದುಗೂಡಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದದ್ದು ಆತನ ಗೆಳೆಯ ಜಯೇಶ್.

ಇಬ್ಬರೂ ಆನಂದಬಾಷ್ಪದೊಂದಿಗೆ ಪರಸ್ಪರ ಅಪ್ಪಿಕೊಂಡರು. ಸಂಕಷ್ಟದ ಸಂದರ್ಭವನ್ನು ಮೆಲುಕು ಹಾಕಿದರು. ‘ನೋಡನೋಡುತ್ತಿದ್ದಂತೆ ನೆರೆಯ ಹಲವರು ಭೂಕುಸಿತ, ಕುಸಿದ ಮನೆಗಳ ಅವಶೇಷಗಳು, ಮಣ್ಣಿನಡಿ ಹೂತುಹೋದರು’ ಎಂಬ ನೋವು ಹಂಚಿಕೊಂಡರು.

‘ಇಲ್ಲಿ ಸುಮಾರು 200 ಕುಟುಂಬಗಳಿದ್ದವು. ಹಿಂದೂ, ಮುಸ್ಲಿಂ ಧರ್ಮ ಎಂದಿಗೂ ತೊಡಕಾಗಿರಲಿಲ್ಲ’ ಎಂದ ಜಯೇಶ್, ‘ನಮ್ಮ ಗ್ರಾಮದಲ್ಲಿ ಪರಸ್ಪರರ ನಡುವೆ ಒಂದು ಭಾವನಾತ್ಮಕ ಸಂಬಂಧವಿತ್ತು’ ಎಂದರು.

‘ಇಲ್ಲಿದ್ದ ಜನರನ್ನು ಈಗ ಬೇರೆಡೆಗೆ ಸ್ಥಳಾಂತರಿಸಬಹುದು. ಆದರೆ, ಗ್ರಾಮಗಳಲ್ಲಿದ್ದ ಪರಸ್ಪರ ಬಾಂಧವ್ಯ ಬಹುಶಃ ಅಲ್ಲಿ ಬರಲಾರದು. ನಾವು ನೆರೆಹೊರೆಯವರು ಹಾಗೇ  ಇದ್ದೆವು‘ ಎಂದು ಜಯೇಶ್‌ ಹೇಳಿದರು.

ವಯನಾಡ್‌ನಲ್ಲಿ ಜುಲೈ 30ರ ಮಧ್ಯರಾತ್ರಿ ಸಂಭವಿಸಿದ ಭೂಕುಸಿತ, ಪ್ರವಾಹದಿಂದಾಗಿ 226 ಜನರು ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ಇನ್ನೂ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.