ನವದೆಹಲಿ: ದೇಶದ ವಾಯುಸೇನೆಗೆ ರಫೇಲ್ ಯುದ್ದ ವಿಮಾನಗಳು ಸೇರ್ಪಡೆಯಾಗುವುದರ ಮೂಲಕ ನಮ್ಮ ಸೈನ್ಯದ ಇತಿಹಾಸದಲ್ಲಿ ಮತ್ತೊಂದು ಮೈಲುಗಲ್ಲು ಸೃಷ್ಟಿಯಾದಂತಾಗಿದೆ. ಭಾರತದ ವಾಯುಸೇನೆಯ ಪರಾಕ್ರಮ ಹೆಚ್ಚಿಸುವಲ್ಲಿ ರಫೇಲ್ ಸೇರಿದಂತೆ ಹಿಂದಿನ ಹಲವು ಯುದ್ಧ ವಿಮಾನಗಳು ಅತಿ ಮುಖ್ಯ ಪಾತ್ರವಹಿಸಿವೆ.
1961ರಲ್ಲಿ ರಷ್ಯಾದಿಂದ ಬಂದಿಳಿದ ಮಿಕೊಯಾನ್-ಗುರೆವಿಚ್ ಡಿಸೈನ್ ಬ್ಯೂರೋ ನಿರ್ಮಿತ ಮಿಗ್-21ರಿಂದ ಹಿಡಿದು ಬುಧವಾರ ದೇಶ ತಲುಪಿದ ರಫೇಲ್ ಯುದ್ಧ ವಿಮಾನಗಳವರೆಗಿನ ಚರಿತ್ರೆ ಹಲವು ಮೈಲುಗಲ್ಲುಗಳನ್ನು ಕಂಡಿದೆ. ಈ ಎಲ್ಲ ಯುದ್ಧ ವಿಮಾನಗಳು ಸ್ವತಂತ್ರ ಭಾರತದ ಯುದ್ಧ ಸಾಮರ್ಥ್ಯವನ್ನು ಹೆಚ್ಚುಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿವೆ.
ಭಾರತದ ವಾಯುಪಡೆಯ ಶಕ್ತಿ ಹೆಚ್ಚಿಸಿದ ಯುದ್ದ ವಿಮಾನಗಳು ಮತ್ತು ಅವುಗಳ ಸಾಮರ್ಥ್ಯದ ಬಗೆಗಿನ ಮಾಹಿತಿ ಇಲ್ಲಿದೆ.
ರಫೇಲ್ ಜೆಟ್
ಫ್ರಾನ್ಸ್ ಮತ್ತು ಭಾರತದ ನಡುವೆ ಒಪ್ಪಂದ ಏರ್ಪಟ್ಟ ನಾಲ್ಕು ವರ್ಷಗಳ ಬಳಿಕ ಮೊದಲ ಹಂತವಾಗಿ ಐದು ಯುದ್ಧ ವಿಮಾನಗಳು ಭಾರತಕ್ಕೆ ಬುಧವಾರ ಬಂದಿವೆ. ಆ ಮೂಲಕ ಭಾರತದ ವಾಯುಸೇನೆಯ ಸಾಮರ್ಥ್ಯವನ್ನು ದುಪ್ಪಟ್ಟು ಮಾಡಿವೆ.
ಪ್ರಾನ್ಸ್ ದೇಶದ ಪ್ರಮುಖ ವಾಯುಯಾನ ಕಂಪನಿ ಡಸಾಲ್ಟ್ ಏವಿಯೇಷನ್‌ನಿಂದ36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 2016ರ ಸೆಪ್ಟೆಂಬರ್‌ನಲ್ಲಿ ₹ 59,000 ಕೋಟಿ ಮೊತ್ತದ ವ್ಯವಹಾರ ಒಪ್ಪಂದ ಮಾಡಿಕೊಂಡಿತ್ತು.
ಯುರೋಪ್ ಮೂಲದ ಎಂಬಿಡಿಎ ಕ್ಷಿಪಣಿ ತಯಾರಕ ಸಂಸ್ಥೆಯು ನಿರ್ಮಿಸಿರುವ ಏರ್-ಟು-ಏರ್ ಕ್ಷಿಪಣಿ, ಸಂದರ್ಭಕ್ಕೆ ಅನುಸಾರವಾಗಿನಿಧಾನವಾಗಿ ಚಲಿಸುವ ಕ್ಷಿಪಣಿ ಮತ್ತು ಎಂಐಸಿಎ ಶಸ್ತ್ರಾಸ್ತ್ರಗಳ ವ್ಯವಸ್ಥೆಯನ್ನು ರಫೇಲ್ ಯುದ್ಧ ವಿಮಾನ ಒಳಗೊಂಡಿದೆ.
ಹೊಸ ತಲೆಮಾರಿನ, ಮಧ್ಯಮ-ಶ್ರೇಣಿಯ, ಏರ್-ಟು-ಲ್ಯಾಂಡ್‌ಶಸ್ತ್ರಾಸ್ತ್ರ ವ್ಯವಸ್ಥೆಯುಳ್ಳ ಹ್ಯಾಮರ್ ಅನ್ನು ರಫೇಲ್ ಯುದ್ಧ ವಿಮಾನಗಳೊಂದಿಗೆ ಸಂಯೋಜಿಸಲು ಭಾರತೀಯ ವಾಯುಸೇನೆ ತಯಾರಿ ನಡೆಸಿದೆ.
ಸುಖೊಯ್–30 ಎಂ.ಕೆ.ಐ
ಸು–30 ಎಂ.ಕೆ.ಐ ಯುದ್ಧ ವಿಮಾನವನ್ನು ರಷ್ಯಾದ ಸುಖೊಯ್ ಕಂಪನಿ ವಿನ್ಯಾಸಗೊಳಿಸಿದ್ದು, ಭಾರತದ ಎಚ್.ಎ.ಎಲ್ ಕಂಪನಿಯ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ರಷ್ಯಾದಲ್ಲಿ ತಯಾರಾದ ಈ ಯುದ್ದ ವಿಮಾನಗಳು ಏರ್-ಟು-ಏರ್ ಮತ್ತು ಏರ್-ಟು-ಲ್ಯಾಂಡ್ ಕ್ಷಿಪಣಿಗಳನ್ನುಹೊಂದಿವೆ.
ಎರಡು ಆಸನ ಹೊಂದಿರುವ, ಬಹುಪಾತ್ರ ನಿರ್ವಹಿಸುವ ಯುದ್ಧ ವಿಮಾನಗಳಾಗಿವೆ. ಒನ್ ಎಕ್ಸ್ 30 ಎಂ.ಎಂ ಜಿ.ಎಸ್.ಎಚ್ ಬಂದೂಕಿನ ಜೊತೆಗೆ 8000 ಕೆಜಿ ಬಾಹ್ಯ ಶಸ್ತ್ರಾಸ್ತ್ರಗಳನ್ನು ಹೊರುವ ಸಾಮರ್ಥ್ಯವನ್ನು ಈ ವಿಮಾನಗಳು ಹೊಂದಿವೆ.
ಗಂಟೆಗೆ ಗರಿಷ್ಠ 2500 ಕಿ.ಮಿ ವೇಗದಲ್ಲಿ ಚಲಿಸುವ ಶಕ್ತಿ ಈ ವಿಮಾನಗಳಿಗಿದೆ.
ಮಿರಾಜ್- 2000
ಭಾರತೀಯ ವಾಯುಪಡೆಯಲ್ಲಿ ಬಹುಪಾತ್ರ ನಿರ್ವಹಿಸುವ ವಿಮಾನಗಳಲ್ಲಿ ಒಂದಾದ ಮಿರಾಜ್- 2000 ಅನ್ನು 1985ರಲ್ಲಿ ಪರಿಚಯಿಸಲಾಯಿತು. ಮಿರಾಜ್ -2000 ಅನ್ನು ಡಸಾಲ್ಟ್ ಏವಿಯೇಷನ್ ಕಂಪನಿಯು ಅಭಿವೃದ್ಧಿಪಡಿಸಿದೆ.
ಒಂದು ಆಸನ, ಒಂದು ಎಂಜಿನ್ ಹೊಂದಿರುವ ಫ್ರೆಂಚ್ ಮೂಲದ ಬಹುಪಾತ್ರ ನಿರ್ವಹಿಸುವ ಯುದ್ದ ವಿಮಾನ ಇದಾಗಿದೆ.
ಅತಿ ದೂರದ ಗುರಿಯನ್ನು ಶೇ 100ರಷ್ಟು ನಿಖರವಾಗಿ ತಲುಪಬಲ್ಲ ಸಾಮರ್ಥ್ಯ ಮಿರಾಜ್- 2000 ಯುದ್ಧವಿಮಾನಕ್ಕೆ ಇದೆ. ಇದು ಗಂಟೆಗೆ 2495 ಕಿ.ಮೀ ಗರಿಷ್ಠ ವೇಗದಲ್ಲಿ ಚಲಿಸುವ ಶಕ್ತಿ ಹೊಂದಿದೆ.
ಎರಡು 30 ಎಂ.ಎಂ ಅವಿಭಾಜ್ಯ ಫಿರಂಗಿಗಳು ಮತ್ತು ಎರಡು ಆರ್ -550 ಮ್ಯಾಜಿಕ್ ಯುದ್ಧ ಕ್ಷಿಪಣಿಗಳನ್ನು ಬಾಹ್ಯ ನಿಲ್ದಾಣಗಳಿಗೆ ಹೊತ್ತೊಯ್ಯುವ ಸಾಮರ್ಥ್ಯವನ್ನು ಈ ವಿಮಾನ ಹೊಂದಿದೆ.
ಮಿಗ್-17
ರಷ್ಯಾ ಮೂಲದ ವಿಮಾನವನ್ನು ಮಿಕೋಯಾನ್-ಗುರೆವಿಚ್ ಡಿಸೈನ್ ಬ್ಯೂರೊ ವಿನ್ಯಾಸಗೊಳಿಸಿದ್ದು,ಒಪ್ಪಂದದಡಿಯಲ್ಲಿ ಎಚ್‌ಎಎಲ್ ತಯಾರಿಸಿದೆ.
ಇದು ಟ್ಯಾಕ್ಟಿಕಲ್ ಸ್ಟ್ರೈಕ್ ಫೈಟರ್ ವಿಮಾನವಾಗಿದ್ದು, ಒಂದು ಎಂಜಿನ್ ಮತ್ತು ಒಂದು ಸೀಟ್ ಅನ್ನು ಹೊಂದಿದೆ. ಇದು ಗಂಟೆಗೆ ಗರಿಷ್ಠ 1700 ಕಿ.ಮಿವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
23 ಎಂ.ಎಂ ಆರು-ಬ್ಯಾರೆಲ್ ರೋಟರಿ ಅವಿಭಾಜ್ಯ ಫಿರಂಗಿಯೊಂದನ್ನು ಮತ್ತು 4,000 ಕೆಜಿ ವರೆಗಿನ ಇತರ ಶಸ್ತ್ರಾಸ್ತ್ರಗಳನ್ನು ಸಾಗಿಸಬಲ್ಲಶಕ್ತಿ ಮಿಗ್-27ಗೆ ಇದೆ.
ಮಿಗ್-29
ರಷ್ಯಾ ನಿರ್ಮಿತ ಮಿಗ್ –29 ಯುದ್ಧ ವಿಮಾನಗಳಿಗೆ ಅತ್ಯಾಧುನಿಕ ಯುದ್ಧ ಸೌಲಭ್ಯಗಳನ್ನು ಅಳವಡಿಸುವ ಮೂಲಕ ಮೇಲ್ದರ್ಜೆಗೆ ಏರಿಸಲಾಗಿದೆ.
ಇದನ್ನು ರಷ್ಯಾ ಮೂಲದ ಮಿಕೋಯಾನ್-ಗುರೆವಿಚ್ ಡಿಸೈನ್ ಬ್ಯೂರೊ ವಿನ್ಯಾಸಗೊಳಿಸಿ, ತಯಾರಿಸಿದೆ. ಇದನ್ನು ಭಾರತ ಸೈನ್ಯಕ್ಕೆ 1985ರಲ್ಲಿ ಪರಿಚಯಿಸಲಾಯಿತು. ಸು -30 ಎಂ.ಕೆ.ಐ ನಂತರ ಎರಡನೇ ಹಂತದ ರಕ್ಷಣೆಗೆ ಮಿಗ್-29 ವಿಮಾನವನ್ನು ಬಳಸಲಾಗುತ್ತದೆ.
ಇದು ಒಂದು ಸೀಟ್‌ನ ವಿಮಾನವಾಗಿದ್ದು, ಎರಡು ಎಂಜಿನ್‌ಗಳನ್ನು ಹೊಂದಿದೆ. ಗಂಟೆಗೆ ಗರಿಷ್ಠ 2,445 ಕಿ.ಮೀ ವೇಗದಲ್ಲಿ ಚಲಿಸಬಲ್ಲದು.
30 ಎಂ.ಎಂ ಫಿರಂಗಿ, ನಾಲ್ಕು ಆರ್-60 ಫಿರಂಗಿಗಳು ಮತ್ತು ಮಧ್ಯಮ ಶ್ರೇಣಿಯ ಎರಡು ಆರ್ -27 ಆರ್ ರೆಡಾರ್ ಮಾರ್ಗದರ್ಶಿ ಕ್ಷಿಪಣಿಗಳನ್ನು ಈ ವಿಮಾನ ಹೊಂದಿದೆ.
ಜಾಗ್ವಾರ್
ಬ್ರಿಟಿಷ್ ಮತ್ತು ಫ್ರೆಂಚ್ ವಾಯುಸೇನೆ ಒಟ್ಟಾಗಿ ಅಭಿವೃದ್ಧಿಪಡಿಸಿದ ಯುದ್ಧ ವಿಮಾನ ಇದಾಗಿದೆ. ಇದು ಒಂದು ಸೀಟ್‌ನ ಎರಡು ಎಂಜಿನ್ ವಿಮಾನವಾಗಿದ್ದು ಗಂಟೆಗೆ 1350 ಕಿ.ಮಿ ವೇಗದಲ್ಲಿ ನುಗ್ಗುವ ಸಾಮರ್ಥ್ಯ ಹೊಂದಿದೆ.
ಎರಡು 30 ಎಂ.ಎಂ ಬಂದೂಕುಗಳು ಮತ್ತು ಎರಡು ಆರ್ -350 ಮ್ಯಾಜಿಕ್ ಸಿಸಿಎಂಗಳ ಜೊತೆಗೆ 4750 ಕೆಜಿ ಬಾಹ್ಯ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲದು.
ಮಿಗ್ -21 ಬಿಸನ್
1961 ರಲ್ಲಿ, ಮಿಕೋಯಾನ್-ಗುರೆವಿಚ್ ಡಿಸೈನ್ ಬ್ಯೂರೊ ನಿರ್ಮಿತ ಮಿಗ್-21 ಬಿಸನ್ ಯುದ್ದ ವಿಮಾನವನ್ನು ಭಾರತ ವಾಯುಸೇನೆ ಆಯ್ಕೆ ಮಾಡಿಕೊಂಡಿತು. ರಷ್ಯಾ ಮೂಲದ ವಿಮಾನವು ಒಂದು ಎಂಜಿನ್, ಒಂದು ಸೀಟ್ ಹೊಂದಿದೆ. ಬಹುಪಾತ್ರ ನಿಭಾಯಿಸುವ ವಿಮಾನವು ಭೂ-ದಾಳಿ ನಡೆಸಲು ಅತಿ ಯೋಗ್ಯವಾಗಿದೆ.
ಇದು ಗಂಟೆಗೆ 2230 ಕಿ.ಮಿ ಗರಿಷ್ಠ ವೇಗದಲ್ಲಿ ಚಲಿಸುವ ಶಕ್ತಿ ಹೊಂದಿದ್ದು, ನಾಲ್ಕು ಆರ್ -60 ಯುದ್ಧ ಕ್ಷಿಪಣಿ, ಒಂದು 23 ಎಂ.ಎಂ ಎರಡು ಬ್ಯಾರೆಲ್ ಫಿರಂಗಿಗಳನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.