ಕಾಸರಗೋಡು: ಕಾಸರಗೋಡಿನಲ್ಲಿ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ರಾತ್ರಿ ಕಾವಲುಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ರಂಜಿತ್ ರಾಮಚಂದ್ರನ್, ಕಷ್ಟಪಟ್ಟು ಉನ್ನತ ಶಿಕ್ಷಣ ಪಡೆದು ಈಗ ರಾಂಚಿಯಲ್ಲಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ (ಐಐಎಂ–ರಾಂಚಿ) ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಸದ್ಯ ಅವರು ಬೆಂಗಳೂರಿನಲ್ಲಿ ಕ್ರೈಸ್ಟ್ ವಿ.ವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, ಶೀಘ್ರವೇ ಐಐಎಂ– ರಾಂಚಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವರು.
ಅದರಲ್ಲೂ, ಪದವಿ ವರೆಗೆ ಮಾತೃಭಾಷೆ ಮಲಯಾಳದಲ್ಲಿ ಓದಿರುವ ಅವರಿಗೆ ಉನ್ನತ ಶಿಕ್ಷಣ, ಪಿಎಚ್.ಡಿ ಪಡೆಯಲು ಭಾಷೆ ಅಡ್ಡಿಯಾಗಲೇ ಇಲ್ಲ. ರಾತ್ರಿ ದುಡಿದು, ಹಗಲಿನ ಸಮಯವನ್ನು ವ್ಯರ್ಥ ಮಾಡದೇ ಯಶಸ್ಸಿನ ಶಿಖರವೇರಿರುವ ಅವರ ಸಾಧನೆ ಇತರರಿಗೆ ಸ್ಫೂರ್ತಿಯಾಗಿದೆ.
ತಾವು ನಡೆದು ಬಂದ ದಾರಿ ಕುರಿತು ಫೇಸ್‌ಬುಕ್‌ನಲ್ಲಿ ರಂಜಿತ್ ಬರೆದುಕೊಂಡಿದ್ದಾರೆ. ಅವರ ಯಶೋಗಾಥೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಏಪ್ರಿಲ್ 9ರಂದು ಅವರು ಫೇಸ್‌ಬುಕ್‌ನಲ್ಲಿ ತಮ್ಮ ಯಶೋಗಾಥೆ ಬರೆದುಕೊಂಡಿದ್ದು, ಈಗಾಗಲೇ 37,000 ಲೈಕುಗಳು ಬಂದಿವೆ.
ಪಣತ್ತೂರಿನವರಾದ ರಂಜಿತ್ ಕಾಸರಗೋಡಿನ ಸೇಂಟ್ ಪಯಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪಡೆದು, ಐಐಟಿ–ಮದ್ರಾಸ್‌ನಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದರು.
‘ನನಗೆ ಮಲಯಾಳ ಮಾತ್ರ ಗೊತ್ತಿದ್ದರಿಂದ, ಅಧ್ಯಯನ ಮುಂದುವರಿಸುವುದು ಕಷ್ಟ ಎನಿಸಿತು. ಪಿಎಚ್.ಡಿ ಅಧ್ಯಯನವನ್ನು ಅರ್ಧದಲ್ಲಿಯೇ ನಿಲ್ಲಿಸಲು ಯೋಚಿಸಿದೆ. ಆದರೆ, ನನ್ನ ಮಾರ್ಗದರ್ಶಕರಾಗಿದ್ದ ಡಾ.ಸುಭಾಷ್ ನನ್ನಲ್ಲಿ ಉತ್ಸಾಹ ತುಂಬಿದರು. ನನ್ನ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಹೋರಾಟ ನಡೆಸಲು ನಾನು ನಿಶ್ಚಯಿಸಿದೆ’ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
‘ತಂದೆ ರಾಮಚಂದ್ರನ್ ಟೈಲರ್ ವೃತ್ತಿಯಲ್ಲಿದ್ದಾರೆ. ತಾಯಿ ಬೇಬಿ ನರೇಗಾ ಅಡಿ ಕೂಲಿ ಕಾರ್ಮಿಕರಾಗಿದ್ದಾರೆ’ ಎಂದೂ ಬರೆದುಕೊಂಡಿದ್ದಾರೆ. ಈಗಲೋ, ಆಗಲೋ ಬೀಳುತ್ತದೆ ಎಂಬ ಸ್ಥಿತಿಯಲ್ಲಿರುವ ಚಾವಣಿ ಹೊಂದಿದ ತಮ್ಮ ಪುಟ್ಟ ಗುಡಿಸಲಿನ ಚಿತ್ರವನ್ನು ಸಹ ಅವರು ತಮ್ಮ ಬರಹದೊಂದಿಗೆ ಹಂಚಿಕೊಂಡಿದ್ದಾರೆ.
‘ಫೇಸ್‌ಬುಕ್‌ನಲ್ಲಿ ನಾನು ಬರೆದುಕೊಂಡಿರುವುದು ಈ ಪ್ರಮಾಣದಲ್ಲಿ ವೈರಲ್ ಆಗುತ್ತದೆ ಎಂದು ಭಾವಿಸಿರಲಿಲ್ಲ. ನನ್ನ ಹೋರಾಟ ಇತರರಿಗೆ ಸ್ಫೂರ್ತಿಯಾಗಲಿ ಎಂಬ ಉದ್ದೇಶದಿಂದ ಬರೆದಿರುವೆ. ಪ್ರತಿಯೊಬ್ಬರು ಒಳ್ಳೆಯದರ ಬಗ್ಗೆಯೇ ಕನಸು ಕಾಣಬೇಕು. ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಶ್ರಮಿಸಬೇಕು’ ಎಂದು ಅವರು ಸುದ್ದಿಗಾರರಿಗೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.