ನವದೆಹಲಿ: ವಾಹನಗಳ ಇಂಧನ ದರ ಏರಿಕೆಯನ್ನು ವಿರೋಧಿಸಿ ದೆಹಲಿಯಲ್ಲಿ ಆಟೊ, ಟ್ಯಾಕ್ಸಿ ಹಾಗೂ ಮಿನಿ ಬಸ್ ಡ್ರೈವರ್‌ಗಳು ಇಂದಿನಿಂದ ಮುಷ್ಕರ ಕೈಗೊಂಡಿದ್ದಾರೆ. ಇದರಿಂದಾಗಿ ದೆಹಲಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇದೆ.
ಪೆಟ್ರೋಲ್, ಡೀಸೆಲ್ ದರ ಏರಿಕೆಯ ಜೊತೆಗೆ ಆಟೊ ಮತ್ತು ಟ್ಯಾಕ್ಸಿಗಳಿಗೆ ಇಂಧನವಾಗಿ ಬಳಸಲಾಗುತ್ತಿರುವ ಸಿಎನ್‌ಜಿ ದರದಲ್ಲೂ ಹೆಚ್ಚಳವಾಗಿದೆ. ವಾಹನ ಚಾಲಕರ ಒಕ್ಕೂಟಗಳು ಆಟೊ ಮತ್ತು ಟ್ಯಾಕ್ಸಿ ಮೀಟರ್ ದರ ಹೆಚ್ಚಿಸಲು ಬೇಡಿಕೆ ಇಟ್ಟಿದ್ದಾರೆ. ಅದರೊಂದಿಗೆ ಸಿಎನ್‌ಜಿ ದರ ಕಡಿಮೆ ಮಾಡುವಂತೆ ಆಗ್ರಹಿಸಿದ್ದಾರೆ.
ದರ ಪರಿಷ್ಕರಣೆಗಾಗಿ ಸಮಿತಿ ರೂಪಿಸುವ ಬಗ್ಗೆ ದೆಹಲಿ ಸರ್ಕಾರವು ಪ್ರಕಟಿಸಿದ್ದರೂ ಒಕ್ಕೂಟಗಳು ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆಯಲು ನಿರಾಕರಿಸಿವೆ.
ಪ್ರತಿ ಕೆ.ಜಿ. ಸಿಎನ್‌ಜಿಗೆ ಸರ್ಕಾರವು (ಕೇಂದ್ರ ಮತ್ತು ರಾಜ್ಯ ) ₹35 ಸಬ್ಸಿಡಿ ನೀಡುವಂತೆ ಬೇಡಿಕೆ ಇಡಲಾಗಿದೆ. ಸಿಎನ್‌ಜಿ ದರದ ಮೇಲೆ ಸಬ್ಸಿಡಿ ನೀಡುವಂತೆ ಇತ್ತೀಚೆಗಷ್ಟೇ ದೆಹಲಿ ಕಾರ್ಯಾಲಯದ ಎದುರು ಆಟೊ, ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರು ಪ್ರತಿಭಟನೆ ನಡೆಸಿದ್ದರು.
ಪ್ರಸ್ತುತ ದೆಹಲಿಯಲ್ಲಿ ಪ್ರತಿ ಕೆ.ಜಿ. ಸಿಎನ್‌ಜಿ ದರ ₹71.61 ಇದೆ.
ದೆಹಲಿಯಲ್ಲಿ ಸುಮಾರು 90,000 ನೋಂದಾಯಿತ ಆಟೊಗಳು, 80,000ಕ್ಕೂ ಹೆಚ್ಚು ಟ್ಯಾಕ್ಸಿಗಳಿವೆ. ಮೆಟ್ರೊ ನಿಲ್ದಾಣಗಳಿಂದ ನಗರದ ಒಳಭಾಗಗಳಿಗೆ ಸಂಚಾರ ನಡೆಸಲು ಆಟೊ ಮತ್ತು ಟ್ಯಾಕ್ಸಿ ಪ್ರಮುಖ ಸಾರಿಗೆ ವ್ಯವಸ್ಥೆಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.