ಬೆಂಗಳೂರು: ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಭೂಗತ ನಿತ್ಯಾನಂದ ಸ್ವಾಮಿ ತಾನು ಮಧುರೈ ಆಧೀನಂನ 293ನೇ ಮಠಾಧೀಶನಾಗಿ ಅಧಿಕಾರ ಸ್ವೀಕರಿಸಿದ್ದೇನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
ಮಧುರೈ ಪೀಠದ ಮಠಾಧೀಶರಾಗಿದ್ದ ಅರುಣಗಿರಿನಾಥ ದೇಶಿಕ ಪರಮಾಚಾರ್ಯ ಸ್ವಾಮಿಗಳು ಆಗಸ್ಟ್ 13 ರಂದು ಉಸಿರಾಟದ ಸಮಸ್ಯೆಯಿಂದ ಮಧುರೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ನಾಲ್ಕು ದಶಕಗಳ ಕಾಲ ಮಧುರೈ ಆಧೀನಂನ ಪೀಠಾಧಿಪತಿಯಾಗಿದ್ದ ಅರಣಗಿರಿನಾಥ ಅವರ ನಿಧನದ ಬಳಿಕ 2019 ರಲ್ಲಿ ಅರುಣಗಿರಿನಾಥ ಸ್ವಾಮಿಗಳು ಕಿರಿಯ ಧರ್ಮಗುರುಗಳಾಗಿ ಹೆಸರಿಸಲ್ಪಟ್ಟ ಹರಿಹರ ದೇಶಿಕ ಜ್ಞಾನಸಂಬಂತ ಪರಮಾಚಾರ್ಯ ಅವರನ್ನು ಉತ್ತರಾಧಿಕಾರಿಯನ್ನಾಗಿ ಘೋಷಿಸಲಾಯಿತು. ಶೀಘ್ರದಲ್ಲೇ ಅವರಿಗೆ ಪೀಠಾಧಿಪತಿಯಾಗಿ ಪಟ್ಟಕಟ್ಟಲಾಗುವುದು ಎಂದು ಮಠದ ಅಧಿಕಾರಿಗಳು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ಈ ಮಧ್ಯೆಯೇ, ಮಧುರೈ ಆಧೀನಂನ ಭಕ್ತರು ಮತ್ತು ಅನುಯಾಯಿಗಳು ಹಾಗೂ ಸಾಮಾನ್ಯ ಜನರನ್ನು ಅಚ್ಚರಿಗೊಳಿಸುವಂತೆ, ನಿತ್ಯಾನಂದ ಮಧುರೈ ಆಧೀನಂನ 293 ನೇ ಮಠಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.
‘ಎಲ್ಲಾ ಆಧ್ಯಾತ್ಮಿಕ, ಧಾರ್ಮಿಕ, ಸಾಂಪ್ರದಾಯಿಕ ಆಚರಣೆಗಳ ಪ್ರಕಾರ ಕೈಲಾಸದ ವಿಶ್ವ ನಿಯಮಗಳು ಮತ್ತು ಮಧುರೈ ಆಧೀನಂನ ಅಧಿಕೃತ ಉತ್ತರಾಧಿಕಾರದ ವಿಧಿ ವಿಧಾನಗಳ ಮೂಲಕ 293 ನೇ ಮಠಾಧೀಶನಾಗಿ ಅಧಿಕಾರ ಸ್ವೀಕಾರ ಪ್ರಕ್ರಿಯೆ ಪೂರ್ಣಗೊಂಡಿವೆ’ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಏಪ್ರಿಲ್ 27, 2012ರಂದು ಅರುಣಗಿರಿನಾಥ ಸ್ವಾಮಿಗಳವರು ನನ್ನನ್ನು ಕಿರಿಯ ಧರ್ಮಗುರುಗಳೆಂದು ಔಪಚಾರಿಕವಾಗಿ ಘೋಷಿಸಿದ್ದರು. ಡಿಸೆಂಬರ್ 19, 2012 ರಂದು ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿತ್ತು.
ನಂತರ, ಅರುಣಗಿರಿನಾಥ ಸ್ವಾಮಿಗಳು ಇಬ್ಬರು ಕಿರಿಯ ಮಠಾಧೀಶರನ್ನು ನೇಮಕ ಮಾಡುವ ಮೂಲಕ ಕಾನೂನು ಸಂಘರ್ಷಕ್ಕೆ ಸಿಲುಕಿದ್ದರು.
ಆದರೆ, ಈಗಲೂ ಮಠದ ಕಿರಿಯ ಸ್ವಾಮೀಜಿಯಾಗಿ ಮಠದ ಭಕ್ತರಿಗೆ ಆನ್‌ಲೈನ್‌ನಲ್ಲಿ ನಿತ್ಯವೂ ಆಶೀರ್ವಚನ ನೀಡುತ್ತಿರುವುದಾಗಿ ನಿತ್ಯಾನಂದ ಸ್ವಾಮಿಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.