ತ್ರಿಶ್ಯೂರ್: ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಉದ್ದೇಶದ ಮಹಿಳಾ ಮೀಸಲಾತಿ ಮಸೂದೆ ಜಾರಿ ಮಾಡುವುದನ್ನು ಕಾಂಗ್ರೆಸ್ ಮತ್ತು ಎಡಪಕ್ಷಗಳು ವಿಳಂಬ ಮಾಡಿದವು. ಆದರೆ, ಈ ಮಸೂದೆ ಜಾರಿಗೆ ಕ್ರಮ ಕೈಗೊಳ್ಳುವ ಮೂಲಕ ಬಿಜೆಪಿಯು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಇಲ್ಲಿ ಹೇಳಿದರು.
ಇಲ್ಲಿ ನಡೆದ ಮಹಿಳೆಯರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ನಾರಿ ಶಕ್ತಿ ವಂದನೆ ಅಧಿನಿಯಮ (ಮಹಿಳಾ ಮೀಸಲಾತಿ) ಈಗ ಕಾನೂನಾಗಿದೆ. ಮಹಿಳಾ ಸಬಲೀಕರಣದ ಬಗ್ಗೆ ತಮಗಿರುವ ಬದ್ಧತೆಯನ್ನು ಈ ರೀತಿ ತೋರ್ಪಡಿಸಿರುವುದಾಗಿ ಹೇಳಿದರು.
ಜೊತೆಗೆ, ‘ತ್ರಿವಳಿ ತಲಾಖ್‌ನಿಂದ ಮುಕ್ತಿ ದೊರಕಿಸಿಕೊಡುವುದಾಗಿ ನಾನು ಮುಸ್ಲಿಂ ಮಹಿಳೆಯರಿಗೆ ಭರವಸೆ ನೀಡಿದ್ದೆ. ಅದನ್ನೂ ಈಡೇರಿಸಿದ್ದೇನೆ’ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ಮತ್ತು ಎಡಪಕ್ಷಗಳು ಮಹಿಳೆಯರ ಶಕ್ತಿಗುಂದಿಸಿದ್ದು ದುರದೃಷ್ಟಕರ ಎಂದ ಅವರು, ಬಡವರು, ಮಹಿಳೆಯರು, ಯುವಜನರು ಮತ್ತು ರೈತರ ಏಳಿಗೆಯು ರಾಷ್ಟ್ರದ ಏಳಿಗೆಯನ್ನು ಖಾತ್ರಿಪಡಿಸುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.