ನವದೆಹಲಿ: ಸದನದ ನಾಲ್ಕು ಗೋಡೆಗಳ ನಡುವೆ ಪಡೆದ ಅನುಭವವನ್ನು ನಾಲ್ಕೂ ದಿಕ್ಕುಗಳಿಗೆ ಪಸರಿಸುವ ಮೂಲಕ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದರು.
72 ಜನ ಸದಸ್ಯರು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ರಾಜ್ಯಸಭೆಯ ಕಲಾಪದಲ್ಲಿ ಬೀಳ್ಕೊಡುಗೆ ಭಾಷಣ ಮಾಡಿದ ಅವರು, ಅನುಭವವು ಜ್ಞಾನಕ್ಕಿಂತ ಅಪಾರ ಶಕ್ತಿ ಹೊಂದಿದೆ. ಸಂಸದರು ತಮ್ಮ ಅನುಭವವನ್ನು ರಾಷ್ಟ್ರದ ಅಭ್ಯುದಯಕ್ಕಾಗಿ ಧಾರೆ ಎರೆಯಬೇಕು ಎಂದು ಕಿವಿಮಾತು ಹೇಳಿದರು.
‘ನಾವು ಈ ನಾಲ್ಕು ಗೋಡೆಗಳಿಂದ ಹೊರ ಹೋಗುತ್ತಿರಬಹುದು. ಆದರೆ, ಇಲ್ಲಿ ಗಳಿಸಿರುವ ಅನುಭವವನ್ನು ದೇಶದ ಹಿತದೃಷ್ಟಿಯಿಂದ ಎಲ್ಲ ದಿಕ್ಕುಗಳಿಗೆ ಕೊಂಡೊಯ್ಯಬೇಕು. ನಿವೃತ್ತರಾಗುತ್ತಿರುವ ಅನೇಕ ಸದಸ್ಯರು ಸುದೀರ್ಘ ಅನುಭವ ಹೊಂದಿದ್ದು, ಇಲ್ಲಿ ಗಳಿಸಿದ ಜ್ಞಾನ ಮತ್ತು ಅನುಭವವನ್ನು ಕೃತಿಯ ಮೂಲಕವೂ ಹೊರತರಬೇಕು’ ಎಂದು ಅವರು ತಿಳಿಸಿದರು.
‘ಅನುಭವಕ್ಕೆ ತನ್ನದೇ ಆದ ಮಹತ್ವವಿದೆ. ಅನುಭವಿಗಳು ನಿವೃತ್ತರಾದಾಗ ಸದನ ಮತ್ತು ರಾಷ್ಟ್ರಕ್ಕೆ ಖಂಡಿತ ನಷ್ಟವಾಗಲಿದೆ. ಆದರೆ, ಅವರ ಅನುಭವವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಅನುಭವಿಗಳು ನಿವೃತ್ತರಾದಾಗ, ಸದನ ಮತ್ತು ರಾಷ್ಟ್ರಕ್ಕೆ ನಷ್ಟವಾಗಲಿದೆ. ಸಂಸದರು ಸದನಕ್ಕೆ ಕೊಡುಗೆ ನೀಡಿದಂತೆಯೇ, ಸದನವೂ ಅವರ ಜೀವನಕ್ಕೆ ಕೊಡುಗೆ ನೀಡಿದೆ. ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಸ್ವಾತಂತ್ರ್ಯಕ್ಕಾಗಿ ಸಾಕಷ್ಟು ಕೊಡುಗೆ ನೀಡಿರುವ ಅನೇಕರ ಕನಸು ನನಸು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಅವರು ಪ್ರತಿಪಾದಿಸಿದರು.
19 ರಾಜ್ಯಗಳನ್ನು ಪ್ರತಿನಿಧಿಸುತ್ತಿರುವ ಒಟ್ಟು 72 ಜನ ಸದಸ್ಯರು ಜುಲೈ ವೇಳೆಗೆ ನಿವೃತ್ತರಾಗಲಿದ್ದಾರೆ. ಇವರಲ್ಲಿ ಏಳು ಜನ ನಾಮನಿರ್ದೇಶಿತ ಸದಸ್ಯರಾಗಿದ್ದು, ಕೆಲವರು ಐದು ಅವಧಿ ಪೂರೈಸಲಿದ್ದಾರೆ.
ನಿವೃತ್ತಿ ಹೊಂದುತ್ತಿರುವ ಸದಸ್ಯರ ಪೈಕಿ ಎ.ಕೆ. ಆಂಟನಿ, ಅಂಬಿಕಾ ಸೋನಿ, ಪಿ.ಚಿದಂಬರಂ, ಆನಂದ್ ಶರ್ಮಾ, ಜೈರಾಮ್ ರಮೇಶ್, ಸುರೇಶ್ ಪ್ರಭು, ಪ್ರಫುಲ್ ಪಟೇಲ್, ಸುಬ್ರಮಣಿಯನ್ ಸ್ವಾಮಿ, ಪ್ರಸನ್ನ ಆಚಾರ್ಯ, ಸಂಜಯ್ ರಾವುತ್, ನರೇಶ್ ಗುಜ್ರಾಲ್, ಸತೀಶ್ ಚಂದ್ರ ಮಿಶ್ರಾ, ಎಂ.ಸಿ. ಮೇರಿ ಕೋಮ್, ಸ್ವಪನ್ ದಾಸ್‌ಗುಪ್ತ, ನರೇಂದ್ರ ಜಾಧವ್ ಮತ್ತಿತರರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.