ನವದೆಹಲಿ: ಜಿ20 ರಾಷ್ಟ್ರಗಳು ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಗೊಳಿಸುವ ಗುರಿಯನ್ನು ಜೀವಂತವಾಗಿರಿಸಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಶುಕ್ರವಾರ ಹೇಳಿದ್ದಾರೆ.
ಜಿ20 ಶೃಂಗಸಭೆಯ ಮುನ್ನಾ ದಿನವಾದ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹವಾಮಾನ ನ್ಯಾಯದ ಆಧಾರದ ಮೇಲೆ ನಂಬಿಕೆಯನ್ನು ಪುನರ್‌ಸ್ಥಾಪಿಸಬೇಕು. ಹಸಿರು ಆರ್ಥಿಕತೆಯ ಮೂಲಕ ನ್ಯಾಯಯುತ ಮತ್ತು ಸಮಾನತೆಯ ಪರಿವರ್ತನೆಯನ್ನು ಮುನ್ನಡೆಸಬೇಕು ಎಂದು ಜಿ20 ರಾಷ್ಟ್ರಗಳ ನಾಯಕರಿಗೆ ಕರೆನೀಡಿದರು.
‘ನಮಗೆ ಈಗ ಸಮಯ ಉಳಿದಿಲ್ಲ. ಸವಾಲುಗಳು ಹೆಚ್ಚುತ್ತಿವೆ. ಹವಾಮಾನ ಬಿಕ್ಕಟ್ಟು ತೀವ್ರವಾಗಿ ಹದಗೆಡುತ್ತಿದೆ. ಆದರೆ, ತುರ್ತುಸ್ಥಿತಿ ಎದುರಿಸಲು ಸಾಮೂಹಿಕ ಪ್ರತಿಸ್ಪಂದನೆ, ಮಹತ್ವಾಕಾಂಕ್ಷೆ, ವಿಶ್ವಾಸಾರ್ಹತೆಯ ಕೊರತೆ ಎದ್ದು ಕಾಣಿಸುತ್ತಿದೆ’ ಎಂದು ಗುಟೆರಸ್ ಹೇಳಿದರು.
ವಿಶ್ವದ ಜಿಡಿಪಿಯ 85 ಪ್ರತಿಶತವನ್ನು ಹೊಂದಿರುವ ಜಿ20 ರಾಷ್ಟ್ರಗಳು ಶೇ 80ರಷ್ಟು ಇಂಗಾಲ ಹೊರಸೂಸುವಿಕೆಗೂ ಕಾರಣವಾಗಿವೆ. ಹವಾಮಾನ ಕುಸಿತ ತಡೆಗಟ್ಟುವುದು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದು ಈ ಎರಡು ಆದ್ಯತೆಯ ಕ್ಷೇತ್ರಗಳಲ್ಲಿ ಜಿ20 ರಾಷ್ಟ್ರಗಳು ನಾಯಕತ್ವ ಪ್ರದರ್ಶಿಸಬೇಕು ಎಂದು ಅವರು ಒತ್ತಾಯಿಸಿದರು.
ಅಭಿವೃದ್ಧಿ ಹೊಂದಿದ ದೇಶಗಳು ಇಂಗಾಲ ಹೊರಸೂಸುವಿಕೆಯಲ್ಲಿ 2040ರ ವೇಳೆಗೆ ನಿವ್ವಳ ಶೂನ್ಯವನ್ನು ಮತ್ತು 2050ರ ವೇಳೆಗೆ ಉದಯೋನ್ಮುಖ ಆರ್ಥಿಕತೆಗಳನ್ನು ಸಾಧಿಸಬೇಕು. ದೊಡ್ಡ ಪ್ರಮಾಣದಲ್ಲಿ ಇಂಗಾಲ ಹೊರಸೂಸುವ ದೇಶಗಳು ಇಂಗಾಲ ಹೊರಸೂಸುವಿಕೆ ಕಡಿತಗೊಳಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕು ಮತ್ತು ಇದನ್ನು ಸಾಧಿಸಲು ಉದಯೋನ್ಮುಖ ಆರ್ಥಿಕತೆ ಬೆಂಬಲಿಸಬೇಕು ಎಂದು ಒತ್ತಾಯಿಸಿದರು.
2015ರ ಪ್ಯಾರಿಸ್ ಹವಾಮಾನ ಒಪ್ಪಂದದಲ್ಲಿ, ಹವಾಮಾನ ಬದಲಾವಣೆಯ ತೀವ್ರ, ವಿನಾಶಕಾರಿ ಮತ್ತು ಬದಲಾಯಿಸಲಾಗದ ಪರಿಣಾಮಗಳನ್ನು ತಪ್ಪಿಸಲು ಕೈಗಾರಿಕಾ ಪೂರ್ವ ಯುಗದ ಉಷ್ಣತೆಯ ಮಟ್ಟಕ್ಕೆ (1850-1900) ಹೋಲಿಸಿದರೆ ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಮಾತ್ರ ಏರಿಕೆ ಇರಬೇಕೆಂಬ ಗುರಿ ಸಾಧಿಸಲು ಒಪ್ಪಿಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.