ADVERTISEMENT

G20 Declaration | ಭಯೋತ್ಪಾದನೆ ನಿಗ್ರಹಕ್ಕೆ ಜಾಗತಿಕ ಸಹಕಾರ ಬಲವರ್ಧನೆ ಅಗತ್ಯ

‘ಜಿ20 ಘೋಷಣೆ’ ಪ್ರತಿಪಾದನೆ * ಸದಸ್ಯ ರಾಷ್ಟ್ರಗಳ ನಾಯಕರಿಂದ ಶಪಥ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2023, 14:29 IST
Last Updated 9 ಸೆಪ್ಟೆಂಬರ್ 2023, 14:29 IST
<div class="paragraphs"><p>ಜಿ20 ಶೃಂಗಸಭೆ</p></div>

ಜಿ20 ಶೃಂಗಸಭೆ

   

ನವದೆಹಲಿ: ‘ಭಯೋತ್ಪಾದನೆಯು ಜಗತ್ತು ಎದುರಿಸುತ್ತಿರುವ ಬಹು ಗಂಭೀರ ಬೆದರಿಕೆ. ಇದನ್ನು ಮಟ್ಟ ಹಾಕಲು ಉಗ್ರ ಸಂಘಟನೆಗಳಿಗೆ ಹಣಕಾಸು ಅಥವಾ ರಾಜಕೀಯ ನೆರವು ನೀಡುವುದನ್ನು ನಿಲ್ಲಿಸುವುದು ಮುಖ್ಯ. ಇದಕ್ಕಾಗಿ ಅಂತರರಾಷ್ಟ್ರೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಬೇಕು’ ಎಂದು ‘ಜಿ20 ಶೃಂಗಸಭೆಯ ಘೋಷಣೆ’ ಶನಿವಾರ ಪ್ರತಿಪಾದಿಸಿದೆ.

‘ಭಯೋತ್ಪಾದಕ ಸಂಘಟನೆಗಳಿಗೆ ಸುರಕ್ಷಿತ ಜಾಗಗಳು ಸಿಗದಂತೆ ನೋಡಿಕೊಳ್ಳಬೇಕು. ಉಗ್ರರ ಕಾರ್ಯಾಚರಣೆ, ನೇಮಕಾತಿ ಹಾಗೂ ಚಲನವಲನಕ್ಕೆ ಕಡಿವಾಣ ಹಾಕುವುದು ಮುಖ್ಯ’ ಎಂದು ಈ ಘೋಷಣೆಯಲ್ಲಿ ಹೇಳಲಾಗಿದೆ.

ADVERTISEMENT

ಉಗ್ರರಿಗೆ ಹಣ ವರ್ಗಾವಣೆಯಾಗುವುದರ ಮೇಲೆ ಕಣ್ಗಾವಲಿರಿಸುವ ಅಂತರರಾಷ್ಟ್ರೀಯ ಸಂಸ್ಥೆ ‘ಹಣಕಾಸು ಕಾರ್ಯಪಡೆ’ಗೆ (ಎಫ್‌ಎಟಿಎಫ್‌) ಅಗತ್ಯವಿರುವ ಸಂಪನ್ಮೂಲವನ್ನು ಹೆಚ್ಚಿಸುವುದಕ್ಕೆ ಜಿ20 ಸದಸ್ಯ ರಾಷ್ಟ್ರಗಳ ಮುಖಂಡರು ಇದೇ ಸಂದರ್ಭದಲ್ಲಿ ಶಪಥ ಕೈಗೊಂಡರು.

ಪ್ರಾದೇಶಿಕ ಮಟ್ಟದಲ್ಲಿ ಎಫ್‌ಎಟಿಎಫ್‌ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸಂಸ್ಥೆಗಳಿಗೂ ಸಂಪನ್ಮೂಲ ಹೆಚ್ಚಿಸಬೇಕು ಎಂಬ ಬಗ್ಗೆಯೂ ಜಿ20 ರಾಷ್ಟ್ರಗಳಿಂದ ಒಕ್ಕೊರಲ ಬೆಂಬಲ ವ್ಯಕ್ತವಾಗಿದೆ.

‘ಜಗತ್ತಿನ ಯಾವುದೇ ಭಾಗದಲ್ಲಿ, ಯಾವುದೇ ಸ್ವರೂಪದ ಮತ್ತು ಯಾರೇ ಎಸಗುವ ಭಯೋತ್ಪಾದನೆ  ಕೃತ್ಯವನ್ನು ಸಮರ್ಥಿಸಲಾಗದು. ಭಯೋತ್ಪಾದನೆ ನಿಗ್ರಹ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು, ಭಯೋತ್ಪಾದನೆಯಿಂದ ಸಂತ್ರಸ್ತರಾದವರಿಗೆ ನೆರವು ನೀಡುವುದು ಹಾಗೂ ಮಾನವ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಗುರಿಗಳು. ಈ ಗುರಿಗಳು ನಮ್ಮಲ್ಲಿ ಸಂಘರ್ಷಕ್ಕೆ ಕಾರಣವಾಗುವ ಬದಲು ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸಲಿವೆ’ ಎಂಬ ಸಂಕಲ್ಪದ ನುಡಿಗಳನ್ನೂ ‘ಜಿ20 ಘೋಷಣೆ’ ಒಳಗೊಂಡಿದೆ.

‘ಉಗ್ರರಿಗೆ ಹಣದ ಹರಿವು, ಹಣ ಅಕ್ರಮ ವರ್ಗಾವಣೆ ಮಟ್ಟಹಾಕಲು ಸಂದರ್ಭದಲ್ಲಿ ಎದುರಾಗುವ ಅಪಾಯಗಳ ನಿವಾರಣೆಗಾಗಿ ಎಫ್‌ಎಟಿಎಫ್‌ ಮಾದರಿಯಂತೆ ಪರಿಣಾಮಕಾರಿ ಕ್ರಮಗಳ ಅನುಷ್ಠಾನ ಮುಖ್ಯ’ ಎಂಬುದನ್ನು ಘೋಷಣೆಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.