ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುವ ಹಿನ್ನೆಲ್ಲೆಯಲ್ಲಿ ದೆಹಲಿ ಮೆಟ್ರೊ ಸೆಪ್ಟೆಂಬರ್ 4ರಿಂದ 13ರವರೆಗೆ 36 ಮೆಟ್ರೊ ನಿಲ್ದಾಣಗಳಲ್ಲಿ ‘ಟೂರಿಸ್ಟ್ ಸ್ಮಾರ್ಟ್ ಕಾರ್ಡ್’ ವ್ಯವಸ್ಥೆಯನ್ನು ಏರ್ಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸ್ಮಾರ್ಟ್ ಕಾರ್ಡ್‌ಗಳು ಒಂದು ದಿನದ ಹಾಗೂ ಮೂರು ದಿನದ ಅವಧಿಗಳಿಗೆ ಲಭ್ಯವಿದ್ದು, ಮೆಟ್ರೊ ಮಾರ್ಗದಲ್ಲಿ ಅನಿಯಮಿತ ಸಂಚಾರಗಳನ್ನು ಮಾಡಬಹುದಾಗಿದೆ.
ಪ್ರವಾಸಿ ಸ್ಮಾರ್ಟ್ ಕಾರ್ಡ್‌ಗಳು ಸಾಮಾನ್ಯ ದಿನಗಳಲ್ಲಿಯೂ ಲಭ್ಯವಿರುತ್ತವೆ ಆದರೆ, ಜಿ20 ಶೃಂಗಸಭೆಯ ದೃಷ್ಟಿಯಿಂದ, ಸೋಮವಾರದಿಂದ 10 ದಿನಗಳ ಅವಧಿಗೆ ಈ ಕಾರ್ಡ್‌ಗಳನ್ನು ಮಾರಾಟ ಮಾಡಲು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿ20 ಶೃಂಗಸಭೆಯು ದೆಹಲಿಯಲ್ಲಿ ಸೆಪ್ಟೆಂಬರ್ 9 ರಿಂದ 10ರವರೆಗೆ ನಡೆಯಲಿದೆ.
ಒಂದು ದಿನದ ಕಾರ್ಡ್ ದರ ₹200 ಇದ್ದರೆ, ಮೂರು ದಿನಗಳ ಪ್ರವಾಸಿ ಕಾರ್ಡ್ ದರ ₹500 ಇರುತ್ತದೆ. ಈ ಮೊತ್ತವು ₹50 ಮರುಪಾವತಿಸಬಹುದಾದ ಭದ್ರತಾ ಠೇವಣಿಯನ್ನು ಒಳಗೊಂಡಿದೆ ಎಂದು ದೆಹಲಿ ಮೆಟ್ರೊ ರೈಲ್ವೆ ಕಾರ್ಪೊರೇಷನ್ ತಿಳಿಸಿದೆ.
ಈ ಕಾರ್ಡ್‌ಗಳನ್ನು ಮಾರಾಟ ಮಾಡಲು ಮೀಸಲಾದ 36 ಕೇಂದ್ರಗಳ ಕೌಂಟರ್‌ಗಳಲ್ಲಿ ಕಾಶ್ಮೀರಿ ಗೇಟ್, ಚಾಂದಿನಿ ಚೌಕ್, ಚಾವ್ರಿ ಬಜಾರ್, ರಾಜೀವ್ ಚೌಕ, ಪಟೇಲ್ ಚೌಕ, ಸೆಂಟ್ರಲ್ ಸೆಕ್ರೆಟರಿಯೇಟ್, ಉದ್ಯೋಗ ಭವನ, ಲೋಕ ಕಲ್ಯಾಣ ಮಾರ್ಗ, ಸುಪ್ರೀಂ ಕೋರ್ಟ್, ಐಟಿಒ, ಹೌಜ್ ಖಾಸ್, ನೆಹರೂ ಸ್ಥಳ, ಕಲ್ಕಾಜಿ ಮಂದಿರ, ಅಕ್ಷರಧಾಮ ಮತ್ತು ಟರ್ಮಿನಲ್ 1 ಐಜಿಐ ವಿಮಾನ ನಿಲ್ದಾಣಗಳು ಸೇರಿವೆ.
ದೆಹಲಿ ಮೆಟ್ರೊ, ಭಾರತದ ಅತಿದೊಡ್ಡ ಮೊಟ್ರೊ ಜಾಲ ಹೊಂದಿದ್ದು, ವಿಶ್ವದ ಅತಿದೊಡ್ಡ ಮೆಟ್ರೊ ವ್ಯವಸ್ಥೆಗಳಲ್ಲಿ ಒಂದಾಗಿದೆ. ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸಿಕೊಂಡು ಮೆಟ್ರೊದ ವಿವಿಧ ಕಾರಿಡಾರ್‌ಗಳಲ್ಲಿ ಪ್ರಯಾಣಿಸುವ ಮೂಲಕ ಪ್ರವಾಸಿಗರು ದೆಹಲಿಯಲ್ಲಿರುವ ಪ್ರವಾಸಿ ಸ್ಥಳಗಳಿಗೆ ಸುಲಭವಾಗಿ ತಲುಪಬಹುದಾಗಿದೆ.
ಪ್ರವಾಸಿಗರು ತಮ್ಮ ಪ್ರಯಾಣವನ್ನು ಯೋಜಿಸಲು ಮೆಟ್ರೊ ನೆಟ್‌ವರ್ಕ್‌ನ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ‘ದೆಹಲಿ ಮೆಟ್ರೊ ರೈಲು’ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಆ್ಯಪ್ ಮುಖಪುಟದಲ್ಲಿ ‘ಟೂರ್ ಗೈಡ್’ ಅಡಿಯಲ್ಲಿ ಮೀಸಲಾದ ವಿಭಾಗಗಳು ಲಭ್ಯವಿದೆ. ಅಲ್ಲಿ ಅವರು ಹತ್ತಿರದ ಎಲ್ಲಾ ನಿಲ್ದಾಣಗಳು ಮತ್ತು ಪ್ರವಾಸಿ ಸ್ಥಳಗಳ ಪಟ್ಟಿಯನ್ನು ಕಾಣಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸ್ಮಾರ್ಟ್ ಕಾರ್ಡ್‌ಗಳು ಪ್ರವಾಸಿಗರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ. ಏಕೆಂದರೆ, ದಿನದಲ್ಲಿ ಲಭ್ಯವಿರುವ ಮೊದಲ ರೈಲಿನಿಂದ ಕೊನೆಯ ರೈಲಿನ ಸೇವೆಯವರೆಗೆ ಸಂಪೂರ್ಣ ಮೆಟ್ರೊ ನೆಟ್‌ವರ್ಕ್‌ನಲ್ಲಿ ಅನಿಯಮಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.