ಗಢಚಿರೋಲಿ: ಮಹಾರಾಷ್ಟ್ರದ ಗಢಚಿರೋಲಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಗ್ರಾಮವೊಂದರ ಕೆರೆ ಉಕ್ಕಿ ಹರಿದಿದ್ದು, 100ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರ ತಡರಾತ್ರಿಯಿಂದ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ಸೂರ್ಯಪಲ್ಲಿ ಗ್ರಾಮದ ಕೆರೆ ಕಟ್ಟೆ ಒಡೆದು ಹಲವು ಮನೆಗಳಿಗೆ ಮತ್ತು ವಸತಿ ಶಾಲೆಗೆ ನೀರು ನುಗ್ಗಿದೆ. 76 ವಿದ್ಯಾರ್ಥಿಗಳು ಸೇರಿದಂತೆ 112 ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಗಢಚಿರೋಲಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಹೇಳಿದ್ದಾರೆ.
ಸಿರೊಂಚದಲ್ಲಿ 180 ಮಿ.ಮೀ ಮಳೆಯಾಗಿದೆ. ಇದರಿಂದಾಗಿ ಜಿಲ್ಲೆಯ ರಸ್ತೆಗಳಿಗೆ ಹಾನಿಯಾಗಿದ್ದು, ಕೆಲವು ಪ್ರದೇಶಗಳ ಸಂಪರ್ಕ ಸ್ಥಗಿತಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಹಾನಿಗೊಳಗಾದ ರಸ್ತೆಗಳ ದುರಸ್ತಿ ಮತ್ತು ಪರ್ಯಾಯ ಮಾರ್ಗಗಳ ರಚನೆ ಸೇರಿದಂತೆ ತಕ್ಷಣದ ಪರಿಹಾರವನ್ನು ಒದಗಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಗಳಿಗೆ ಗಢಚಿರೋಲಿ ಜಿಲ್ಲಾಧಿಕಾರಿ ಸಂಜಯ್ ದೈನ್ ಸೂಚಿಸಿದ್ದಾರೆ.
ಜಿಲ್ಲೆಯ ಭಾಮ್ರಗಡ ತಾಲೂಕಿನ ಕುಡ್ಕೇಲಿ ಗ್ರಾಮವೊಂದರಲ್ಲಿ ಭಾರಿ ಮಳೆಯಿಂದಾಗಿ ರಸ್ತೆಗೆ ಹಾನಿಯಾಗಿದ್ದು, ಆಂಬುಲೆನ್ಸ್ ಬರಲು ಸಾಧ್ಯವಾಗದ ಕಾರಣ ಗರ್ಭಿಣಿ ಮಹಿಳೆಯೊಬ್ಬರನ್ನು ಅಗೆಯುವ ಯಂತ್ರದ ಸಹಾಯದಿಂದ ರಸ್ತೆ ದಾಟಿಸಲಾಗಿದೆ. ಬಳಿಕ ಆಶಾ ಕಾರ್ಯಕರ್ತೆ ಮತ್ತು ಸ್ಥಳೀಯ ಆರೋಗ್ಯ ಇಲಾಖೆಯ ಸಿಬ್ಬಂದಿ ಇನ್ನೊಂದು ಬದಿಯಲ್ಲಿ ಕಾಯುತ್ತಿದ್ದ ಆಂಬುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.