ADVERTISEMENT

ಕಾನೂನು ಸ್ಥಿತಿ ಸುಧಾರಿಸದಿದ್ದರೆ ಹೆದ್ದಾರಿ ಯೋಜನೆ ಬಂದ್: ಪಂಜಾಬ್‌ಗೆ ಎಚ್ಚರಿಕೆ

ಪಿಟಿಐ
Published 10 ಆಗಸ್ಟ್ 2024, 16:01 IST
Last Updated 10 ಆಗಸ್ಟ್ 2024, 16:01 IST
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ   

ನವದೆಹಲಿ: ಪಂಜಾಬ್‌ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸ್ಥಿತಿ ಸುಧಾರಿಸದಿದ್ದರೆ ಸದ್ಯ ಚಾಲ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ರದ್ದು ಅಥವಾ ಕೈಬಿಡುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಕೇಂದ್ರ ಎಚ್ಚರಿಸಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ) ರಾಜ್ಯದಲ್ಲಿ ಎಂಟು ಹೆದ್ದಾರಿ ಕಾಮಗಾರಿ ಕೈಗೊಂಡಿದೆ. ಕಾನೂನು ಸ್ಥಿತಿ ಸುಧಾರಿಸದಿದ್ದರೆ ಯೋಜನೆ ಕೈಬಿಡದೇ ಅನ್ಯಮಾರ್ಗವಿಲ್ಲ ಎಂದು ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ರಾಜ್ಯ ಸರ್ಕಾರಕ್ಕೆ ಪತ್ರಬರೆದಿದ್ದಾರೆ.

293 ಕಿ.ಮೀ. ಅಂತರದ ರಸ್ತೆ ನಿರ್ಮಾಣದ ಈ ಯೋಜನೆಗಳ ಒಟ್ಟು ವೆಚ್ಚ ₹ 14,288 ಕೋಟಿ ಎಂದಿದ್ದಾರೆ. ಇತ್ತೀಚೆಗೆ ದೆಹಲಿ–ಕತ್ರಾ ಎಕ್ಸ್‌ಪ್ರೆಸ್‌ವೇ ಯೋಜನೆಯಲ್ಲಿ ನಡೆದ ಎರಡು ಘಟನೆಗಳನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ADVERTISEMENT

ಜಲಂಧರ್ ಜಿಲ್ಲೆಯಲ್ಲಿ ಎಂಜಿನಿಯರ್ ಮತ್ತು ಗುತ್ತಿಗೆದಾರನ ಮೇಲೆ ತೀವ್ರ ಹಲ್ಲೆನಡೆದಿದ್ದು, ಎಫ್‌ಐಆರ್‌ ದಾಖಲಿಸಿದೆ. ಲೂಧಿಯಾನ ಜಿಲ್ಲೆಯಲ್ಲಿ ನಡೆದ ಇನ್ನೊಂದು ಘಟನೆಯಲ್ಲಿಯೂ ದುಷ್ಕರ್ಮಿಗಳು ಎಂಜಿನಿಯರ್‌ಗಳ ಟೆಂಟ್‌ಗಳಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಲಾಗಿದೆ ಎಂದು ಆಗಸ್ಟ್‌ 9ರಂದು ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಎನ್‌ಎಚ್ಎಐ ಅಧಿಕಾರಿಗಳ ಲಿಖಿತ ಮನವಿಯ ನಂತರವೂ ಎರಡನೇ ಪ್ರಕರಣದಲ್ಲಿ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ. ಆರೋಪಿಗಳನ್ನು ಬಂಧಿಸಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ಕಾನೂನು ಸುವ್ಯವಸ್ಥೆ ಸಮಸ್ಯೆಯಿಂದಾಗಿ ಅನೇಕ ಗುತ್ತಿಗೆದಾರರು ಒಪ್ಪಂದ ರದ್ದತಿಗೆ ಮನವಿ ಮಾಡಿದ್ದಾರೆ. ಈಗಾಗಲೇ ₹ 3,263 ಕೋಟಿ ಅಂದಾಜು ವೆಚ್ಚದ 3 ಯೋಜನೆ ರದ್ದಾಗಿದೆ ಎಂದು ತಿಳಿಸಿದ್ದಾರೆ.

ಜುಲೈ 15ರಂದು ಎನ್‌ಎಚ್‌ ಯೋಜನೆಗಳ ಪ್ರಗತಿ ಪರಿಶೀಲನೆ ನಡೆದಿತ್ತು. ಆದ್ಯತೆ ಮೇರೆಗೆ ಭೂಸ್ವಾಧೀನ ಪ್ರಕರಣ ಇತ್ಯರ್ಥಪಡಿಸುವ ಭರವಸೆಯನ್ನು ಅಲ್ಲಿ ನೀಡಲಾಗಿತ್ತು. ಆದರೆ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. 

‍ಪಂಜಾಬ್ ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರದಲ್ಲಿ, ಎಂಜಿನಿಯರ್‌ಗಳ ಮೇಲೆ ನಡೆದಿರುವ ಹಲ್ಲೆಗೆ ಸಂಬಂಧಿಸಿದ ಫೋಟೊಗಳನ್ನೂ ಗಡ್ಕರಿ ಅವರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.