ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಗಗನಯಾನ ಯೋಜನೆ ಅಡಿ ಬಾಹ್ಯಾಕಾಶಕ್ಕೆ ಹಾರಲಿರುವ ನಾಲ್ವರು ಭಾರತೀಯ ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪ್ರಕಟಿಸಿದ್ದಾರೆ.
ಕ್ಯಾಪ್ಟನ್ ಪಿ. ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಎಸ್. ಶುಕ್ಲಾ ಅವರು ಕಕ್ಷೆಗೆ ಹಾರಲಿರುವ ಗಗನಯಾನಿಗಳಾಗಿದ್ದಾರೆ. ಅವರ ಬಗೆಗಿನ ಮಾಹಿತಿ ಇಲ್ಲಿದೆ.
ಕ್ಯಾಪ್ಟನ್ ಪಿ. ಬಾಲಕೃಷ್ಣನ್ ನಾಯರ್
ಕೇರಳದ ತಿರುವಳಿಯಾಡ್‌ನಲ್ಲಿ 1976, ಆಗಸ್ಟ್ 26ರಂದು ಪಿ. ಬಾಲಕೃಷ್ಣನ್ ನಾಯರ್ ಜನಿಸಿದ್ದಾರೆ. ಎನ್‌ಡಿಎಯ ಹಳೆಯ ವಿದ್ಯಾರ್ಥಿ ಮತ್ತು ಏರ್ ಫೋರ್ಸ್ ಅಕಾಡೆಮಿಯಲ್ಲಿ ಸ್ವೋರ್ಡ್ ಆಫ್ ಆನರ್ (ಗೌರವ ಸೂಚಕ ಖಡ್ಗ) ಪಡೆದಿದ್ದಾರೆ. ಅವರು 19 ಡಿಸೆಂಬರ್ 1998 ರಂದು ಐಎಎಫ್‌ನ ಫೈಟರ್ ಸ್ಟ್ರೀಮ್‌ನಲ್ಲಿ ನಿಯೋಜನೆಯಾಗಿದ್ದರು. ಇವರು ಸುಮಾರು 3000 ಗಂಟೆಗಳ ವಿಮಾನ ಹಾರಾಟದ ಅನುಭವವನ್ನು ಹೊಂದಿರುವ ಟೆಸ್ಟ್ ಪೈಲಟ್ ಆಗಿದ್ದಾರೆ. ನಾಯರ್ ಅವರು Su-30 MKI, MiG-21, MiG-29, ಹಾಕ್, ಡಾರ್ನಿಯರ್, An-32, ಸೇರಿದಂತೆ ವಿವಿಧ ವಿಮಾನಗಳ ಹಾರಾಟ ನಡೆಸಿದ್ದಾರೆ.
ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್
1982ರ ಏಪ್ರಿಲ್ 19ರಂದು ತಮಿಳುನಾಡಿನ ಚೆನ್ನೈನಲ್ಲಿ ಅಜಿತ್ ಕೃಷ್ಣನ್ ಜನಿಸಿದ್ದಾರೆ. ವಾಯಪಡೆಯಲ್ಲಿ ರಾಷ್ಟ್ರಪತಿ ಚಿನ್ನದ ಪದಕ ಗೆದ್ದ ಇವರು, ಗೌರವ ಖಡ್ಗವನ್ನೂ ಪಡೆದಿದ್ದರು. ಇವರು ವಿಮಾನ ಹಾರಾಟ ತರಬೇತುದಾರರಾಗಿದ್ದು, 2900 ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿದ ಟೆಸ್ಟ್ ಪೈಲಟ್ ಆಗಿದ್ದಾರೆ. Su-30 MKI, MiG-21, MiG-21, Mig-29, Jaguar, Dornier, An-32 ಸೇರಿದಂತೆ ಹಲವು ವಿಮಾನಗಳ ಹಾರಾಟ ನಡೆಸಿದ್ದಾರೆ.
ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್
1982, ಜುಲೈ 17 ರಂದು ಪ್ರಯಾಗ್‌ರಾಜ್‌ನಲ್ಲಿ ಅಂಗದ್ ಪ್ರತಾಪ್ ಅವರು ಜನಿಸಿದ್ದಾರೆ. ಎನ್‌ಡಿಎಯ ಹಳೆಯ ವಿದ್ಯಾರ್ಥಿಯಾಗಿರುವ ಇವರು 2004ರಲ್ಲಿ ಐಎಎಫ್‌ಗೆ ಸೇರಿಕೊಂಡರು. ಸುಮಾರು 2000 ಗಂಟೆ ವಿಮಾನ ಹಾರಾಟ ನಡೆಸಿದ ಅನುಭವ ಹೊಂದಿರುವ ಅಂಗದ್ ಅವರು, Su-30 MKI, MiG-21, MiG-29, Jaguar, Hawk, Dornier, An-32ನಂತಹ ವಿವಿಧ ರೀತಿಯ ವಿಮಾನಗಳ ಹಾರಾಟ ನಡೆಸಿದ್ದಾರೆ.
ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ
ಉತ್ತರ ಪ್ರದೇಶದ ಲಖನೌದಲ್ಲಿ 1985ರ ಅಕ್ಟೋಬರ್ 10ರಂದು ಶುಭಾಂಶು ಶುಕ್ಲಾ ಅವರು ಜನಿಸಿದ್ದಾರೆ. 17 ಜೂನ್ 2006 ರಂದು ಐಎಎಫ್‌ನ ಫೈಟರ್ ಸ್ಟ್ರೀಮ್‌ನಲ್ಲಿ ಇವರನ್ನು ನಿಯೋಜಿಸಲಾಗಿತ್ತು. ಫೈಟರ್ ಯುದ್ಧ ವಿಮಾನಗಳ ನಾಯಕರಾಗಿದ್ದ ಇವರು ಸರಿಸುಮಾರು 2000 ಗಂಟೆಗಳ ವಿಮಾನ ಹಾರಾಟ ಮಾಡಿರುವ ಅನುಭವವಿದೆ. Su-30 MKI, MiG-21, MiG-29, Jaguar, Hawk, Dornier, An-32 ಸೇರಿ ವಿವಿಧ ರೀತಿಯ ಯುದ್ಧ ವಿಮಾನ ಹಾರಾಟ ನಡೆಸಿದ ಅನುಭವ ಇವರದ್ದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.