ಬೆಂಗಳೂರು: ಮಂಗಳೂರಿನಲ್ಲಿ 1930ರಲ್ಲಿ ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ ಜಾರ್ಜ್ ಫರ್ನಾಂಡಿಸ್ ಜನಿಸಿದರು. ಇವರು ಕಾರ್ಮಿಕ ಸಂಘಟನೆಯ ನೇತಾರ, ಕೃಷಿಕ, ಸಾಮಾಜಿಕ ಕಾರ್ಯಕರ್ತ ಮತ್ತು ಪತ್ರಕರ್ತರಾಗಿದ್ದ ಅಪರೂಪದ ಸಂಸದ.
ಇದನ್ನೂ ಓದಿ:ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ
ಕ್ರಮವಾಗಿ ಜಾರ್ಜ್ ಅವರು 4, 6, 7 9, 10, 11, 12, 13, 14ನೇ ಲೋಕಸಭೆಗೆ ಮತ್ತು 2009ರಲ್ಲಿ ರಾಜ್ಯಸಭೆ ಪ್ರವೇಶಿಸಿದ್ದರು. ಅವರು ಕಾರ್ಮಿಕ ಪರ ಹೋರಾಟಗಳಲ್ಲಿ ಭಾಗವಹಿಸಿದ್ದರು, ಡಾ.ಲೋಹಿಯಾ ಅವರ ಪ್ರಭಾವಕ್ಕೆ ಒಳಗಾಗಿ ಸಮಾಜವಾದಿಯಾದರು.
ಉದ್ಯೋಗ ಅರಸಿ ಮುಂಬೈಗೆ ತೆರಳಿದ ಅವರು ಅನೇಕ ಹೋರಾಟಗಳಲ್ಲಿ ಭಾಗವಹಿಸಿದರು.
ಸಂಯುಕ್ತ ಸಮಾಜವಾದಿ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿ ಕಾಂಗ್ರೆಸ್‌ನ ಎಸ್.ಕೆ.ಪಾಟೀಲ್ ಅವರನ್ನು ಸೋಲಿಸಿ ‘ಜೈಂಟ್ ಕಿಲ್ಲರ್’ (ದೈತ್ಯ ಸಂಹಾರಕ) ಎಂದು ಪ್ರಸಿದ್ಧರಾದರು. 1969ರಲ್ಲಿ ಇವರು ಸಂಯುಕ್ತ ಸಮಾಜವಾದಿ ಪಕ್ಷದ ಪ್ರಧಾನಕಾರ್ಯದರ್ಶಿಯಾದರು.
ಜನತಾ ದಳದ ಹಿರಿಯ ಸದಸ್ಯರಾಗಿದ್ದ ಅವರು ಮುಂದೆ ಸಮತಾ ಪಕ್ಷ ಸ್ಥಾಪಿಸಿದರು. ಅಖಿಲ ಭಾರತ ರೈಲ್ವೆ ಫೆಡರೇಷನ್ನ ಮುಖಂಡರಾಗಿ 1974ರಲ್ಲಿ ಅವರು ಸಂಘಟಿಸಿದ ಮುಷ್ಕರ ತೀವ್ರ ಸ್ವರೂಪ ಪಡೆದು ಇಂದಿರಾ ಗಾಂಧಿ ಅವರ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿತು. ಈ ಹಿನ್ನೆಲೆಯಲ್ಲಿ ಇಂದಿರಾ ಅವರು ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಿ ಇವರನ್ನು ಬಂಧಿಸಿದರು.
1977ರಲ್ಲಿ ನಡೆದ ಮಹಾಚುನಾವಣೆಯಲ್ಲಿ ಜಾರ್ಜ್ ಅವರು ಬಿಹಾರದ ಮುಜಫರ್ನಗರದಿಂದ ಸ್ಪರ್ಧಿಸಿ 3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿ ಕೇಂದ್ರ ಸಚಿವರಾದರು.
ಇದನ್ನೂ ಓದಿ:ಎಲ್ಲಿದ್ದೀರಿ ಜಾರ್ಜ್? ಹೇಗಿದ್ದೀರಿ ಜಾರ್ಜ್?
ಆ ಸಮಯದಲ್ಲಿ ಜಾರ್ಜ್ ಅವರು ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಾಗ ಬಹುರಾಷ್ಟ್ರೀಯ ಕಂಪೆನಿಗಳಾದ ಐಬಿಎಂ ಮತ್ತು ಕೋಕಾಕೋಲ ಭಾರತದಿಂದ ಕಾಲ್ತೆಗೆದವು. ವಿ.ಪಿ.ಸಿಂಗ್ ಅವರ ಸರ್ಕಾರದಲ್ಲಿ ರೈಲ್ವೆ ಮಂತ್ರಿಯಾಗಿದ್ದ ಇವರು ಕೊಂಕಣ ರೈಲ್ವೆ ಯೋಜನೆಗೆ ಜೀವ ಕೊಟ್ಟರು. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ರಕ್ಷಣಾ ಮಂತ್ರಿಯಾಗಿದ್ದರು. ಪ್ರಖರ ಭಾಷಣಗಳಿಗೆ ಇವರು ದೇಶದಾದ್ಯಂತ ಹೆಸರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.