ಚೆನ್ನೈ: ‘ಗಾಜಾ’ ಚಂಡಮಾರುತ ತೀವ್ರತೆ ಹೆಚ್ಚಿದ್ದರಿಂದ ತಮಿಳುನಾಡಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
‘ನಾಗಪಟ್ಟಣಂ ಜಿಲ್ಲೆಗೆ ಗಾಜಾ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ತಮಿಳುನಾಡು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ತಮಿಳುನಾಡಿನ ಪಾಂಬನ್ ಹಾಗೂ ಕಡಲೂರು ಮತ್ತು ಪುದುಚೇರಿ ಅತಿ ಹೆಚ್ಚು ಪ್ರಭಾವಕ್ಕೆ ಒಳಗಾಗುವ ಪ್ರದೇಶಗಳಾಗಿವೆ.
ನೈರುತ್ಯ ಮುಂಗಾರು ಆರಂಭವಾದ ಬಳಿಕ ನಿಧಾನಗತಿಯಲ್ಲಿದ್ದ ಚಂಡಮಾರುತ ಈಗ ವೇಗದಿಂದ ಸಾಗುತ್ತಿದೆ. ಪ್ರತಿ ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ ಮತ್ತು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಾಗಪಟ್ಟಣಂ ಜಿಲ್ಲೆಯ ಹಲವು ಭಾಗಗಳಲ್ಲಿ ಗುರುವಾರ ಸಂಜೆಯಿಂದಲೇ ಭಾರಿ ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ರಾಮೇಶ್ವರಂ ಸಮೀಪದ ಧನುಶ್ಕೋಟಿಯಲ್ಲಿನ ಜನರನ್ನು ಸಹ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.
ನಾಗಪಟ್ಟಣ, ತಿರುವರೂರ್, ಕಡಲೂರು ಸೇರಿದಂತೆ ಏಳು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಲವು ಸ್ಥಳಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ಪಡೆಯನ್ನು ನಿಯೋಜಿಸಲಾಗಿದೆ. ಭಾರತೀಯ ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆ ಸಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತದ ಕಾರಣಕ್ಕೆ ಚೆನ್ನೈನಿಂದ ನಾಗಪಟ್ಟಣಂ, ತಿರುವರೂರ್ ಮತ್ತು ತಂಜಾವೂರಿಗೆ ತೆರಳುವ ಮೂರು ರೈಲುಗಳ ಸಂಚಾರವನ್ನು ದಕ್ಷಿಣ ರೈಲ್ವೆ ರದ್ದುಪಡಿಸಿದೆ. ತಮಿಳುನಾಡಿನ ದಕ್ಷಿಣ ಭಾಗದ ಜಿಲ್ಲೆಗಳಿಗೆ ತೆರಳುವ ಕೆಲವು ರೈಲುಗಳ ಮಾರ್ಗಗಳನ್ನು ಸಹ ಬದಲಾಯಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗಾಜಾ ಚಂಡಮಾರುತದ ಚಲನೆಯ ಚಿತ್ರಗಳನ್ನು ಹವಾಮಾನ ಇಲಾಖೆ ಟ್ವಿಟ್ ಮಾಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಚಂಡಮಾರುತ ಅಪ್ಪಳಿಸುವ ತಮಿಳುನಾಡಿನ ಪ್ರದೇಶದಲ್ಲಿ ಸನ್ನದ್ಧವಾಗಿರುವುದಾಗಿ ಟ್ವೀಟ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.