ಬೀಜಿಂಗ್: ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಕಳೆದ ಜೂನ್ 15ರಂದು ಭಾರತ ಮತ್ತು ಚೀನಾದ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ತಮ್ಮ ಸೇನೆಯ ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಚೀನಾವು ಇದೇ ಮೊದಲ ಬಾರಿ ಶುಕ್ರವಾರ ಒಪ್ಪಿಕೊಂಡಿದೆ.
ಚೀನಾದ ಸೇನೆಯು ಇಬ್ಬರು ಅಧಿಕಾರಿಗಳು ಮತ್ತು ಮೂವರು ಸೈನಿಕರಿಗೆ ಶೌರ್ಯ ಪ್ರಶಸ್ತಿಗಳನ್ನು ನೀಡಿದೆ. ಅವರಲ್ಲಿ ಒಬ್ಬ ಅಧಿಕಾರಿ ಮತ್ತು ಮೂವರು ಸೈನಿಕರಿಗೆ ಮರಣೋತ್ತರವಾಗಿ ಈ ಗೌರವ ಸಲ್ಲಿಸಲಾಗಿದೆ. ಪಶ್ಚಿಮದಲ್ಲಿ ಗಡಿ ರಕ್ಷಣೆ ಮಾಡಿದ್ದಕ್ಕಾಗಿ ಈ ಗೌರವ ನೀಡಲಾಗಿದೆ ಎಂದು ಚೀನಾದ ಸುದ್ದಿಸಂಸ್ಥೆ ಕ್ಸಿನುವಾ ವರದಿ ಮಾಡಿದೆ. ಚೀನಾ ಸೇನೆಯ ಪತ್ರಿಕೆ ‘ದಿ ಪೀಪಲ್ಸ್ ಲಿಬರೇಷನ್ ಆರ್ಮಿ ಡೈಲಿ’ಯನ್ನು ಉಲ್ಲೇಖಿಸಿ ಈ ವರದಿ ನೀಡಲಾಗಿದೆ.
ಕಾರಕೋರಂ ಪರ್ವತ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಐವರು ಅಧಿಕಾರಿಗಳು ಮತ್ತು ಸೈನಿಕರ ತ್ಯಾಗಕ್ಕೆ ಪ್ರತಿಯಾಗಿ ಅವರಿಗೆ ಸೇನಾ ಗೌರವ ನೀಡಲಾಗುತ್ತಿದೆ ಎಂದು ಚೀನಾದ ಕೇಂದ್ರೀಯ ಸೇನಾ ಆಯೋಗವು (ಸಿಎಂಸಿ) ಹೇಳಿದೆ. ಗಡಿಯಲ್ಲಿ ಭಾರತದ ಜತೆಗಿನ ಸಂಘರ್ಷವನ್ನು ಉಲ್ಲೇಖಿಸಿಯೇ ಶೌರ್ಯ ಪ್ರಶಸ್ತಿ ನೀಡಲಾಗಿದೆ.ಸಿಎಂಸಿಗೆ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೇ ಅಧ್ಯಕ್ಷರು.
ಬೆಟಾಲಿಯನ್ ಕಮಾಂಡರ್ ಚೆನ್ ಹೊಂಗ್‌ಜುನ್ ಅವರಿಗೆ ‘ಗಡಿ ರಕ್ಷಣೆಯ ಹೀರೊ’ ಪ್ರಶಸ್ತಿ ಮತ್ತು ಚೆನ್ ಕ್ಸಿಯಾಂಗ್‌ರಾಂಗ್, ಷಿಯಾವೊ ಸಿಯುವಾನ್ ಮತ್ತು ವಾಂಗ್ ಝೌರಾನ್ ಅವರಿಗೆ ಪ್ರಥಮ ದರ್ಜೆಯ ಶೌರ್ಯ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡ
ಲಾಗಿದೆ. ಗಡಿ ಸಂಘರ್ಷದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕ್ವಿ ಫಬಾವೊ ಅವರಿಗೆ ‘ಹೀರೊ ರೆಜಿಮೆಂಟ್ ಕಮಾಂಡರ್’ ಪ್ರಶಸ್ತಿ ಕೊಡಲಾಗಿದೆ.
ಎಂಟು ತಿಂಗಳ ಬಳಿಕ ಈ ವಿಷಯವನ್ನು ಬಹಿರಂಗಪಡಿಸಿದ್ದು ಏಕೆ ಎಂಬ ಪ್ರಶ್ನೆಗೆ, ಜನರಿಗೆ ಸತ್ಯ ತಿಳಿಸಲೇಬೇಕು. ಜನರು ಈ ಸತ್ಯಕ್ಕಾಗಿ ಎದುರು ನೋಡುತ್ತಿದ್ದರು ಮತ್ತು ಅವರಿಗೆ ನಿಜವಾದ ವಿಚಾರ ಏನೆಂದು ಗೊತ್ತಾಗಬೇಕು ಎಂಬ ಉತ್ತರ ನೀಡಲಾಗಿದೆ.
ಗಾಲ್ವನ್ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಇದು ನಾಲ್ಕು ದಶಕಗಳಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಅತ್ಯಂತ ಹಿಂಸಾತ್ಮಕವಾದ ಮುಖಾಮುಖಿಯಾಗಿತ್ತು. ತಮ್ಮ ಕಡೆಯಲ್ಲಿಯೂ ಸಾವು ನೋವು ಸಂಭವಿಸಿದೆ ಎಂದು ಚೀನಾ ಆಗಲೇ ಹೇಳಿತ್ತು. ಆದರೆ, ವಿವರಗಳನ್ನು ಬಹಿರಂಗ ಮಾಡಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.