ADVERTISEMENT

'ಸ್ವಾತಂತ್ರ್ಯದ ಮೊದಲ ದಿನವನ್ನು ಗಾಂಧಿ ಪಾಕಿಸ್ತಾನದಲ್ಲಿ ಕಳೆಯಲಿಚ್ಛಿಸಿದ್ದರು'

ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್‌ ಪುಸ್ತಕದಲ್ಲಿ ಉಲ್ಲೇಖ

ಪಿಟಿಐ
Published 19 ಜನವರಿ 2020, 19:58 IST
Last Updated 19 ಜನವರಿ 2020, 19:58 IST
ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ   

ನವದೆಹಲಿ: ಮಹಾತ್ಮ ಗಾಂಧಿ ಸ್ವಾತಂತ್ರ್ಯದ ಮೊದಲ ದಿನವನ್ನು ಭಾರತದ ಬದಲಾಗಿ (1947 ಆಗಸ್ಟ್‌ 15) ವಿಭಜನೆಯಾದ ಪಾಕಿಸ್ತಾನದಲ್ಲಿ) ಕಳೆಯಲಿಚ್ಛಿಸಿದ್ದರು ಎಂದು ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್‌ ಅವರು ಬರೆದಿರುವ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

‘ಭಾರತದ ವಿಭಜನೆಯಲ್ಲಿ ಗಾಂಧಿ ಅವರಿಗೆ ನಂಬಿಕೆ ಇರಲಿಲ್ಲ. ಇದು ಧೋರಣೆಯಾಗಿರಲಿಲ್ಲ ಅಥವಾ ಇಸ್ಲಾಂ ಎಂಬ ಧರ್ಮದ ಮೇಲೆ ವಿಭಜನೆಯಾದ ರಾಷ್ಟ್ರಕ್ಕೆ ನೀಡಿದ ಬೆಂಬಲದ ಸೂಚಕವಾಗಿರಲಿಲ್ಲ. ಇದು ಪ್ರತಿರೋಧವಾಗಿತ್ತು’ ಎಂದು ‘ಗಾಂಧೀಸ್‌ ಹಿಂದುಯಿಸಮ್‌: ದಿ ಸ್ಟ್ರಗಲ್‌ ಅಗೈನ್ಸ್ಟ್‌ಜಿನ್ಹಾಸ್‌ ಇಸ್ಲಾಂ’ ಹೆಸರಿನ ಕೃತಿಯಲ್ಲಿ ಲೇಖಕರು ಬರೆದಿದ್ದಾರೆ.

‘ಪಾಕಿಸ್ತಾನದಲ್ಲಿರುವ ಹಿಂದೂ ಹಾಗೂ ಭಾರತದಲ್ಲಿದ್ದ ಮುಸ್ಲಿಂ ಅಲ್ಪಸಂಖ್ಯಾತರ ಸ್ಥಿತಿಗತಿಯ ಬಗ್ಗೆಯೇ ಸ್ವಾತಂತ್ರ್ಯ ದೊರಕಿದ ನಂತರ ಗಾಂಧೀಜಿ ಕಳವಳ ಹೊಂದಿದ್ದರು. ಪೂರ್ವ ಪಾಕಿಸ್ತಾನದ ನೋಆಖಾಲಿಯಲ್ಲಿ ಇರಲು ಬಯಸಿದ್ದರು. ಈ ಭಾಗದಲ್ಲಿ 1946ರಲ್ಲಿ ನಡೆದ ದಂಗೆಯಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆದಿತ್ತು. ಈ ಕೋಮುಗಲಭೆಯ ಕಹಿ ಘಟನೆಯಿಂದ ಜನರನ್ನು ಹೊರತರಲು ಗಾಂಧಿ ಪ್ರಯತ್ನಿಸುತ್ತಿದ್ದರು’ ಎಂದು ಲೇಖಕರು ಬರೆದಿದ್ದಾರೆ.

ADVERTISEMENT

‘ಸ್ವಾತಂತ್ರ್ಯದ ನಂತರ ಪಾಕಿಸ್ತಾನದಲ್ಲೇ ವಾಸಿಸುವ ಕುರಿತು ಗಾಂಧಿ ಪಠಾಣ್‌ ನಾಯಕ ಅಬ್ದುಲ್‌ ಘಫರ್‌ ಖಾನ್‌ ಅವರ ಬಳಿ 1947 ಮೇ 31ರಂದು ಹೇಳಿದ್ದರು. ದೇಶದ ವಿಭಜನೆಯಲ್ಲಿ ನನಗೆ ನಂಬಿಕೆ ಇಲ್ಲ. ನಾನು ಯಾರ ಅನುಮತಿಯನ್ನೂ ಪಡೆಯುವುದಿಲ್ಲ. ಪಾಕಿಸ್ತಾನ ರಚನೆಯಾದರೆ ನಾನು ಅಲ್ಲಿಯೇ ಹೋಗಿ ವಾಸಿಸುತ್ತೇನೆ. ನನಗೆ ಏನು ಮಾಡುತ್ತಾರೊ ನೋಡೋಣ, ನನ್ನನ್ನು ಕೊಂದರೆ ಸಾವನ್ನು ನಗುಮೊಗದಿಂದ ಅಪ್ಪಿಕೊಳ್ಳುತ್ತೇನೆ ಎಂದು ಗಾಂಧೀಜಿ ಹೇಳಿದ್ದರು’ ಎಂದು ಕೃತಿಯಲ್ಲಿಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.