ಮುಂಬೈ: ನಗರದ ವಿವಿಧೆಡೆ ಗುರುವಾರ ಬೆಳಗ್ಗೆ ವರೆಗೆ 66,700ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ.
10 ದಿನಗಳ ವರೆಗೆ ನಡೆಯುವ ಗಣೇಶೋತ್ಸವದ ಅಂಗವಾಗಿ ಗಣೇಶ ಮೂರ್ತಿಗಳನ್ನು ಒಂದೂವರೆ ದಿನ, ಐದು ದಿನ, ಏಳು ದಿನ ಹಾಗೂ ಹತ್ತು ದಿನಗಳ ಬಳಿಕ ನೀರಿನಲ್ಲಿ ಮುಳುಗಿಸುವ ಪ್ರತೀತಿ ಇದೆ.
ಬಿಎಂಸಿ ಅಧಿಕಾರಿಗಳ ಪ್ರಕಾರ, ಸಮುದ್ರ ಹಾಗೂ ಕೃತಕ ಹೊಂಡಗಳೂ ಸೇರಿದಂತೆ ಇತರೆಡೆಗಳಲ್ಲಿ ಗುರುವಾರ ಬೆಳಗ್ಗೆ 6ರ ವರೆಗೆ 66,785 ಮೂರ್ತಿಗಳನ್ನು ಮುಳುಗಿಸಲಾಗಿದೆ. ಈ ಪೈಕಿ 66,435 ಮೂರ್ತಿಗಳು ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದವುಗಳಾಗಿದ್ದು, ಉಳಿದ 350 ಸಾರ್ವಜನಿಕ ಸ್ಥಳಗಳಲ್ಲಿ ಇರಿಸಿದ್ದವು.
ಸ್ವಾಭಾವಿಕ ನೀರಿನ ಮೂಲಗಳು ಮಲಿನಗೊಳ್ಳುವುದನ್ನು ತಡೆಯಲು ನಗರದಾದ್ಯಂತ ನಿರ್ಮಿಸಲಾಗಿರುವ ಕೃತಕ ಹೊಂಡಗಳಲ್ಲಿ 27,736 ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಇದರಲ್ಲಿ 27,564 ಮನೆಗಳಲ್ಲಿ ಕೂರಿಸಿದ್ದ ಮೂರ್ತಿಗಳಾಗಿದ್ದು, ಉಳಿದವು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದವು.
ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಈ ವರ್ಷ 191 ಕೃತಕ ಹೊಂಡಗಳನ್ನು ತೆರೆದಿರುವ ಬಿಎಂಸಿ, 69 ಸ್ವಾಭಾವಿಕ ಜಲಮೂಲಗಳನ್ನು ಮೀಸಲಿರಿಸಿದೆ.
ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಬಿಎಂಸಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.