ADVERTISEMENT

ಮುಸ್ಲಿಂ ಪೋಷಾಕಿನಲ್ಲಿ ಗಣೇಶ ಮೂರ್ತಿಗೆ ಪರ – ವಿರೋಧ: ಬಾಲಿವುಡ್ ಸಿನಿಮಾ ಪ್ರೇರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಸೆಪ್ಟೆಂಬರ್ 2024, 13:15 IST
Last Updated 16 ಸೆಪ್ಟೆಂಬರ್ 2024, 13:15 IST
<div class="paragraphs"><p>ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಸ್ಥಾಪಿಸಲಾಗಿರುವ ಗಣೇಶ ಮೂರ್ತಿ</p></div>

ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಸ್ಥಾಪಿಸಲಾಗಿರುವ ಗಣೇಶ ಮೂರ್ತಿ

   

ಹೈದರಾಬಾದ್: ಗಣೇಶನನ್ನು ಬಗೆಬಗೆಯ ರೂಪ ಹಾಗೂ ಅಲಂಕಾರಗಳಿಂದ ಸಜ್ಜುಗೊಳಿಸುವ ಮೂಲಕ ಸಾರ್ವಜನಿಕ ಗಣೇಶ ಮಂಡಳಗಳು ಪ್ರತಿ ವರ್ಷ ಜನರ ಗಮನ ಸೆಳೆಯುವ ಯತ್ನ ನಡೆಸುತ್ತವೆ. ಆದರೆ ತೆಲಂಗಾಣದಲ್ಲಿ ಗಣೇಶ ಮೂರ್ತಿಯನ್ನು ಮುಸ್ಲಿಮರಂತೆ ಸಿದ್ಧಪಡಿಸಲಾಗಿದೆ ಎಂಬ ವಿಷಯ ಈಗ ಪರ ಹಾಗೂ ವಿರೋಧ ಚರ್ಚೆಗೆ ಕಾರಣವಾಗಿದೆ.

ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಗಣೇಶ ಮೂರ್ತಿಯನ್ನು ಮುಸ್ಲಿಂ ಪೋಷಾಕಿನಲ್ಲಿ ಸಜ್ಜುಗೊಳಿಸಿದ್ದಕ್ಕೆ ಒಂದೆಡೆ ವ್ಯಾಪಕ ವಿರೋಧ ವ್ಯಕ್ತವಾದರೆ, ಮತ್ತೊಂದೆಡೆ ಜಾತ್ಯತೀತ ಸಂಕೇತ ಎಂದು ಇನ್ನೂ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ.

ADVERTISEMENT

ಗಣೇಶೋತ್ಸವ ಸಮಿತಿ ಸಿದ್ಧಪಡಿಸಿದ ಈ ಗಣೇಶನಿಗೆ ಕಡುಹಸಿರು ವಸ್ತ್ರ ಧರಿಸಿದ್ದು, ತಲೆಗೆ ಮುಸ್ಲಿಮರು ತೊಡುವ ಪೇಟೆವನ್ನು ಹಾಕಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಇದರ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ರಣವೀರ್ ಸಿಂಗ್‌, ಪ್ರಿಯಾಂಕಾ ಚೋಪ್ರಾ ಹಾಗೂ ದೀಪಿಕಾ ಪಡುಕೋಣೆ ನಟನೆಯ ಬಾಲಿವುಡ್‌ ಚಲನಚಿತ್ರ ‘ಬಾಜಿರಾವ್ ಮಸ್ತಾನಿ’ಯಿಂದ ಪ್ರೇರಣೆ ಪಡೆದಿದ್ದು ಎಂದು ಆಯೋಜಕರು ಹೇಳಿದ್ದಾರೆ.

‘ಚಿತ್ರದಲ್ಲಿ ರಣವೀರ್‌ ಸಿಂಗ್‌ ತೊಟ್ಟಿದ್ದ ಪೋಷಾಕನ್ನೇ ಹೋಲುವಂತೆ ಗಣೇಶ ಮೂರ್ತಿಯನ್ನು ಸಜ್ಜುಗೊಳಿಸಲಾಗಿದೆ. ಆದರೆ ಇಲ್ಲಿ ಯಾರೊಬ್ಬರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ’ ಎಂದು ತಿಳಿಸಿದ್ದಾರೆ.

‘ದಿ ಜೈಪುರ ಡೈಲಾಗ್ಸ್‌’ ಎಂಬ ಸಾಮಾಜಿಕ ಮಾಧ್ಯಮ ಎಕ್ಸ್‌ನ ಖಾತೆಯೊಂದರಲ್ಲಿ ಈ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ‘ಹಿಂದೂಗಳ ಪ್ರತಿಯೊಂದು ಕಾರ್ಯಗಳ ಆರಂಭದಲ್ಲಿ ಪೂಜಿತನಾಗುವ ಗಣೇಶನನ್ನು ಮುಸ್ಲಿಂ ಪೋಷಾಕಿನಲ್ಲಿ ತೋರಿಸುವ ಮೂಲಕ ನಮ್ಮ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ. ಇದು ಮಿತಿಮೀರಿದ ಜಾತ್ಯಾತೀತತೆ. ಹಿಂದೂಗಳನ್ನು ಗರಿಷ್ಠ ಮಟ್ಟದಲ್ಲಿ ಅವಮಾನ ಮಾಡಲಾಗಿದೆ’ ಎಂದೆನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.