ಪೋರ್ಟ್ ಬ್ಲೇಯರ್:ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿಸಲಾಗಿರುವ ಅಂಡಮಾನ್ ಮತ್ತು ನಿಕೋಬಾರ್‌ನ ಮುಖ್ಯ ಕಾರ್ಯದರ್ಶಿಯಾಗಿದ್ದ ಜಿತೇಂದ್ರ ನರೇನ್ ಅವರನ್ನು ಇಲ್ಲಿನ ಮುಖ್ಯ ಜ್ಯುಡಿಷಿಯಲ್ ನ್ಯಾಯಾಧೀಶರು ಶುಕ್ರವಾರ ಪೊಲೀಸ್ ವಶಕ್ಕೆ ನೀಡಿದ್ದಾರೆ.
ಹಿರಿಯ ಐಎಎಸ್ ಅಧಿಕಾರಿ ನರೇನ್ ಅವರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ನ್ಯಾಯಾಲಯವನ್ನು ಕೋರಿದ್ದರು. ಅತ್ಯಾಚಾರ ಆರೋಪ ಎದುರಿಸುತ್ತಿರುವ ಇನ್ನಿತರ ಅಧಿಕಾರಿಗಳ ಬಂಧನ ಇನ್ನೂ ಆಗಿಲ್ಲ.
ಬಂಧನ ಭೀತಿಯಿಂದಾಗಿ ನರೇನ್ ಅವರು ಇಲ್ಲಿನ ಸ್ಥಳೀಯ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದರು. ಆದರೆ, ಅವರ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದರು. ನಂತರ ನರೇನ್ ಅವರನ್ನು ಗುರುವಾರ ಬಂಧಿಸಲಾಗಿತ್ತು.
ಬಂಧನದ ಬಳಿಕ ಪೊಲೀಸರು ನರೇನ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದರು. ವೈದ್ಯಕೀಯ ಪರೀಕ್ಷೆ ಮುಗಿಸಿ ಆಸ್ಪತ್ರೆಯಿಂದ ಹೊರಬರುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಮೇಲಿನ ಆರೋಪ ಸುಳ್ಳು. ಇದೊಂದು ಪಿತೂರಿ’ ಎಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು (ಎಸ್‌ಐಟಿ) ನರೇನ್ ಅವರನ್ನು ಈವರೆಗೆ ಮೂರು ಬಾರಿ ವಿಚಾರಣೆ ನಡೆಸಿದೆ.
ಏನಿದು ಪ್ರಕರಣ?
‘ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ನನ್ನನ್ನು ಅವರ ಮನೆಗೆ ಕರೆದರು. ನಂತರ ನರೇನ್ ಮತ್ತು ಇತರ ಉನ್ನತ ಮಟ್ಟದ ಅಧಿಕಾರಿಗಳು ಏಪ್ರಿಲ್ 14 ಮತ್ತು ಮೇ 1ರಂದು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ’ ಎಂದು 21 ವರ್ಷದ ಯುವತಿ ದೂರು ನೀಡಿದ್ದರು.
‘ತಂದೆ ಹಾಗೂ ಮಲತಾಯಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಆರ್ಥಿಕವಾಗಿ ಸಬಲಳಾಗಬೇಕು ಎನ್ನುವ ಕಾರಣಕ್ಕಾಗಿ ಉದ್ಯೋಗ ಪಡೆಯಲು ಬಯಸಿದ್ದೆ. ಅದಕ್ಕಾಗಿ ನನ್ನ ಕೆಲವು ಪರಿಚಯಸ್ಥರು ನನ್ನನ್ನು ಕಾರ್ಮಿಕ ಆಯುಕ್ತರಿಗೆ ಬಳಿಗೆ ಕರೆದುಕೊಂಡು ಹೋದರು. ಆಯುಕ್ತರು ನರೇನ್ ಅವರಿಗೆ ಆಪ್ತರಾಗಿದ್ದರು’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
‘ಸಂದರ್ಶನ’ ನಡೆಸದೆ ‘ಕೇವಲ ಶಿಫಾರಸಿನ ಮೇಲೆ ದ್ವೀಪದ ಹಲವು ಇಲಾಖೆಗಳಲ್ಲಿ ಸುಮಾರು ‘7,800 ಅಭ್ಯರ್ಥಿ’ಗಳಿಗೆ ನರೇನ್ ಅವರು ಕೆಲಸ ಕೊಡಿಸಿದ್ದಾರೆ’ ಎಂದೂ ಯುವತಿ ದೂರಿದ್ದಾರೆ.
ನರೇನ್ ಅವರನ್ನು ದೆಹಲಿ ಹಣಕಾಸು ನಿಗಮದ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದ ಬಳಿಕ ಅಕ್ಟೋಬರ್ 1ರಂದು ಅತ್ಯಾಚಾರ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿತ್ತು. ಅಕ್ಟೋಬರ್ 17ರಂದು ತಕ್ಷಣದಿಂದ ಜಾರಿಯಾಗುವಂತೆ ಸರ್ಕಾರವು ನರೇನ್ ಅವರನ್ನು ಕೆಲಸದಿಂದ ವಜಾ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.