ಬಾಘ್‌ಪಥ್: ಉತ್ತರ ಪ್ರದೇಶದ ಗ್ಯಾಂಗ್‍ಸ್ಟರ್ ಮುನ್ನಾ ಭಜರಂಗಿ ಸೋಮವಾರ ಬೆಳಗ್ಗೆ ಗುಂಡೇಟಿಗೆ ಬಲಿಯಾಗಿದ್ದಾನೆ.2005ರಲ್ಲಿ ಬಿಜೆಪಿ ನಾಯಕರೊಬ್ಬರನ್ನು ಹತ್ಯೆಗೈದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಭಜರಂಗಿಗೆ ಜೀವ ಬೆದರಿಕೆ ಇದೆ ಎಂದು ಒಂದು ವಾರದ ಹಿಂದೆಯಷ್ಟೇ ಆತ ಪತ್ನಿ ದೂರಿದ್ದಳು.
ಮೂಲಗಳ ಪ್ರಕಾರ ಸೋಮವಾರ ಬೆಳಗ್ಗೆ 6.30ಕ್ಕೆ ಬಾಘ್‌ಪಥ್ ಜೈಲಿನಲ್ಲಿ ಕೈದಿಗಳೆಲ್ಲರೂ ಟೀ ಕುಡಿಯಲು ಹೋಗಿದ್ದಾಗ ಸುನಿಲ್ ರಾತಿಯತ್ ಎಂಬ ಕೈದಿ ಭಜರಂಗಿಗೆಗುಂಡಿಟ್ಟುಹತ್ಯೆ ಮಾಡಿದ್ದಾನೆ.
ಭಾನುವಾರ ಝಾನ್ಸಿ ಜೈಲಿನಿಂದ ಬಾಘ್‌ಪಥ್ ಜೈಲಿಗೆ ಕರೆ ತಂದಿದ್ದ ಭಜರಂಗಿಯನ್ನು ಸೋಮವಾರ ಬೆಳಗ್ಗೆ ಬಾಘ್‌ಪಥ್ ನ್ಯಾಯಾಲಯಕ್ಕೆ ಹಾಜರುಪಡಿಸುವುದಿತ್ತು.ಈ ಹತ್ಯೆ ಪ್ರಕರಣಕ್ಕೆ ಸಂಬಂಧ ಜೈಲು ಅಧಿಕಾರಿ, ಆತನ ಸಹಾಯಕರು ಮತ್ತು ಇನ್ನಿಬ್ಬರನ್ನು ವಜಾ ಮಾಡಲಾಗಿದೆ.
ಪ್ರೇಮ್ ಪ್ರಕಾಶ್ ಎಂಬ ಹೆಸರಿನ ಮುನ್ನಾ ಭಜರಂಗಿ 2005ರಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರೈಯನ್ನು ಹತ್ಯೆ ಮಾಡಿದ್ದನು.ಎಕೆ 47ನಿಂದ 100ಕ್ಕಿಂತಲೂ ಹೆಚ್ಚು ಬಾರಿ ಗುಂಡು ಹಾರಿಸಿ ರೈಯನ್ನು ಹತ್ಯೆ ಮಾಡಿದ್ದ ಆರೋಪದಲ್ಲಿ ಅಕ್ಟೋಬರ್ 2009ರಲ್ಲಿ ಮುನ್ನಾನನ್ನು ಬಂಧಿಸಲಾಗಿತ್ತು.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಆದೇಶಿಸಿದ್ದು, ಜೈಲು ಅಧಿಕಾರಿಯನ್ನು ವಜಾಗೊಳಿಸಲಾಗಿದೆ.ಜೈಲಿನೊಳಗೆ ಇಂಥಾ ಘಟನೆ ನಡೆದಿರುವುದು ಗಂಭೀರ ಪ್ರಕರಣಗಳಲ್ಲೊಂದಾಗಿದೆ.ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.