ಠಾಣೆ: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಗ್ಯಾಂಗ್‌ಸ್ಟರ್ ರವಿ ಪೂಜಾರಿ ಸಹಚರ ವಿಜಯ್ ಪುರುಷೋತ್ತಮ ಸಾಲ್ವಿ ಅಲಿಯಾಸ್ ವಿಜಯ್ ತಂಬಟ್‌ನನ್ನು ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ (ಎಂಸಿಒಸಿಎ) ವಿಜಯ್ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದು ಕ್ರೈಂ ಬ್ರಾಂಚ್ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ದೇಶಬಿಟ್ಟು ಪರಾರಿಯಾಗಿದ್ದ ಈತನ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿತ್ತು.
ಯುಎಇಯಿಂದ ಬಂದಿಳಿದ ವಿಜಯ್‌ನನ್ನು ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆದು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
₹10 ಕೋಟಿ ನೀಡುವಂತೆ 2017ರಲ್ಲಿ ರೋಮಾ ಬಿಲ್ಡರ್ಸ್‌ನ ಮಹೇಂದ್ರ ಪಮ್ನಾನಿ ಅವರಲ್ಲಿ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ವಿಜಯ್‌ನನ್ನು ಬಂಧಿಸಲಾಗಿದೆ. ಪಮ್ನಾನಿ ಅವರಿಗೆ ರವಿ ಪೂಜಾರಿ ಕೂಡ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದ ಮತ್ತು ಅವರ ಕಚೇರಿಗೆ ಶಾರ್ಪ್ ಶೂಟರ್‌ಗಳನ್ನು ಕಳುಹಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಕೊಲೆಯತ್ನ ಪ್ರಕರಣದಲ್ಲೂ ವಿಜಯ್ ಆರೋಪಿಯಾಗಿದ್ದಾನೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.