ADVERTISEMENT

ಗ್ಯಾಂಗ್‌ಸ್ಟರ್‌ ಅತೀಕ್‌, ಅಶ್ರಫ್‌ ಗುಂಡೇಟಿಗೆ ಬಲಿ

ಪತ್ರಕರ್ತರ ಸೋಗಿನಲ್ಲಿ ದಾಳಿ ನಡೆಸಿದ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2023, 22:45 IST
Last Updated 15 ಏಪ್ರಿಲ್ 2023, 22:45 IST
ಪ್ರಯಾಗ್‌ರಾಜ್‌ನಲ್ಲಿ ಪೊಲೀಸರ ಬಿಗಿಭದ್ರತೆಯಲ್ಲಿ ಪಾತಕಿಗಳಾದ ಅಶ್ರಫ್‌ ಅಹ್ಮದ್‌ ಮತ್ತು ಅತೀಕ್‌ ಅಹ್ಮದ್‌ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆತರುತ್ತಿರುವುದು
ಪ್ರಯಾಗ್‌ರಾಜ್‌ನಲ್ಲಿ ಪೊಲೀಸರ ಬಿಗಿಭದ್ರತೆಯಲ್ಲಿ ಪಾತಕಿಗಳಾದ ಅಶ್ರಫ್‌ ಅಹ್ಮದ್‌ ಮತ್ತು ಅತೀಕ್‌ ಅಹ್ಮದ್‌ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆತರುತ್ತಿರುವುದು   

ಪ್ರಯಾಗ್‌ರಾಜ್‌: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಶನಿವಾರ ರಾತ್ರಿ ಗ್ಯಾಂಗ್‌ಸ್ಟರ್‌, ಮಾಜಿ ಸಂಸದ ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರ ಅಶ್ರಫ್‌ ಅಹ್ಮದ್‌ ಪೊಲೀಸರ ಬಿಗಿ ಭದ್ರತೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ತೆರಳುತ್ತಿದ್ದಾಗಲೇ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ.

ಈ ಗುಂಡಿನ ದಾಳಿಯ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕೃತ್ಯ ಎಸಗಿದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪತ್ರಕರ್ತರ ಸೋಗಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪೊಲೀಸರು ಮತ್ತು ಮಾಧ್ಯಮದವರ ಎದುರೇ ಅತೀಕ್‌ ಮತ್ತು ಅಶ್ರಫ್‌ ಮೇಲೆ ಏಕಾಏಕಿ ದಾಳಿ ನಡೆಸಿದರು. ತೀರಾ ಹತ್ತಿರದಲ್ಲಿಯೇ ದಾಳಿ ನಡೆದಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ಕೆಲಕಾಲ ಉದ್ರಿಕ್ತ ಪರಿಸ್ಥಿತಿ ತಲೆದೋರಿತ್ತು.

ADVERTISEMENT

ಬಿಎಸ್‌ಪಿಯ ಮಾಜಿ ಶಾಸಕ ರಾಜು ಪಾಲ್‌ ಅವರ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್‌ ಪಾಲ್‌ ಕೊಲೆ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳಾಗಿದ್ದರು.

ಉತ್ತರ ಪ್ರದೇಶದ ಪೊಲೀಸರು ಝಾನ್ಸಿಯಲ್ಲಿ ಗುರುವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಉಮೇಶ್‌ ಪಾಲ್ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಅತೀಕ್‌ ಅಹ್ಮದ್‌ನ ಪುತ್ರ ಅಸಾದ್‌ ಹಾಗೂ ಆತನ ಸಹಚರ ಗುಲಾಮ್‌ ಹತ್ಯೆಯಾಗಿದ್ದರು.

ಪಾತಕಿ ಅತೀಕ್‌ ಮೇಲೆ ಉಮೇಶ್‌ ಪಾಲ್‌ ಕೊಲೆ ಸೇರಿದಂತೆ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಘಟನೆ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಟ್ವೀಟ್‌ ಮಾಡಿದ್ದು, ‘ಉತ್ತರ ಪ್ರದೇಶದಲ್ಲಿ ಅಪರಾಧ ಚಟುವಟಿಕೆಗಳು ಉತ್ತುಂಗಕ್ಕೇರಿವೆ. ಪೊಲೀಸರ ಭದ್ರತೆಯಲ್ಲಿ ಇರುವವವರೇ ಗುಂಡೇಟಿಗೆ ಬಲಿಯಾದರೆ ಜನಸಾಮಾನ್ಯರ ಪಾಡೇನು. ಈ ಘಟನೆಯಿಂದ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೆಲವರು ಉದ್ದೇಶಪೂರ್ವಕವಾಗಿಯೇ ಸಮಾಜದ ನೆಮ್ಮದಿ ಹದಗೆಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.