ಮುಂಬೈ: ಹೋಟೆಲ್ ಉದ್ಯಮಿ ಜಯ ಶೆಟ್ಟಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್ ಚೋಟಾ ರಾಜನ್‌ಗೆ ಇಲ್ಲಿನ ವಿಶೇಷ ನ್ಯಾಯಾಲಯ ಗುರುವಾರ (ಮೇ 30) ಜೀವಾವಧಿ ಶಿಕ್ಷೆ ವಿಧಿಸಿದೆ.
ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಎ.ಎಂ.ಪಾಟೀಲ್ ಅವರು, ಚೋಟಾ ರಾಜನ್ ಅಪರಾಧಿ ಎಂದು ತೀರ್ಪು ನೀಡಿದ್ದಾರೆ.
ಜಯ ಶೆಟ್ಟಿ ಅವರು ಕೇಂದ್ರ ಮುಂಬೈನ ಗಾಮ್‌ದೇವಿಯಲ್ಲಿ ಗೋಲ್ಡನ್ ಕ್ರೌನ್ ಹೋಟೆಲ್ ಹೊಂದಿದ್ದರು. ಅವರನ್ನು ಹೋಟೆಲ್‌ನ ಮೊದಲ ಮಹಡಿಯಲ್ಲಿ 2001ರ ಮೇ 4ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಹೋಟೆಲ್ ಮ್ಯಾನೇಜರ್ ನೀಡಿದ್ದ ದೂರಿನ ಅನ್ವಯ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಶೆಟ್ಟಿ ಅವರಿಂದ ಸುಲಿಗೆ ಮಾಡಲು ರಾಜನ್ ಗ್ಯಾಂಗ್‌ನ ಹೇಮಂತ್ ಪೂಜಾರಿ ಕರೆ ಮಾಡುತ್ತಿದ್ದ. ಆದರೆ, ಹಣ ನೀಡದ್ದಕ್ಕೆ ಶೆಟ್ಟಿ ಅವರನ್ನು ಕೊಲೆ ಮಾಡಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿತ್ತು.
ಸುಲಿಗೆ ಮತ್ತು ಸಂಬಂಧಿತ ಕೃತ್ಯಗಳ ಸಂಬಂಧ ರಾಜನ್ ವಿರುದ್ಧ ಎಂಸಿಒಸಿಎ ಅಡಿಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಶೆಟ್ಟಿ ಪ್ರಕರಣವನ್ನೂ ಅದೇ ಕಾಯ್ದೆ ಅಡಿಯಲ್ಲಿ ಸೇರಿಸಿಕೊಳ್ಳಲಾಗಿತ್ತು.
ಪ್ರಕರಣದ ಹಿಂದಿನ ವಿಚಾರಣೆಗಳ ಸಂದರ್ಭ ಇನ್ನೂ ಇಬ್ಬರನ್ನು ಅಪರಾಧಿಗಳೆಂದು ತೀರ್ಪು ನೀಡಲಾಗಿದೆ. ಸಾಕ್ಷ್ಯಗಳ ಕೊರತೆಯಿಂದಾಗಿ ಮತ್ತೊಬ್ಬನನ್ನು ಖುಲಾಸೆಗೊಳಿಸಲಾಗಿದೆ.
ರಾಜನ್‌ಗೆ 2011ರಲ್ಲಿ ಪತ್ರಕರ್ತ ಜೆ ಡೇ ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.