ಕಾನ್ಪುರ: ರೈಲು ಹಳಿಯ ಮೇಲೆ ಖಾಲಿ ಗ್ಯಾಸ್ ಸಿಲಿಂಡರ್ ಇಟ್ಟು ಗೂಡ್ಸ್ ರೈಲನ್ನು ಹಳಿ ತಪ್ಪಿಸಲು ಯತ್ನಿಸಲಾಗಿದೆ. ಆದರೆ ಸಮಯಪ್ರಜ್ಞೆ ಮೆರೆದಿರುವ ಲೊಕೊಪೈಲಟ್ ತುರ್ತು ಬ್ರೇಕ್ ಹಾಕಿ ರೈಲು ನಿಲ್ಲಿಸಿದ್ದು, ಅನಾಹುತವೊಂದು ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು (ಭಾನುವಾರ) ಬೆಳಿಗ್ಗೆ 8.10ರ ಸುಮಾರಿಗೆ ಕಾನ್ಪುರದ ಪ್ರೇಮಪುರ ರೈಲು ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದೆ. ರೈಲು ಕಾನ್ಪುರದಿಂದ ಅಲಹಾಬಾದ್‌ಗೆ ತೆರಳುತ್ತಿತ್ತು ಎಂದು ಅವರು ಹೇಳಿದ್ದಾರೆ.
‘ಐದು ಕೆ.ಜಿಯ ಖಾಲಿ ಗ್ಯಾಸ್ ಸಿಲಿಂಡರ್ ಅನ್ನು ಹಳಿಯ ಮೇಲೆ ಇರಿಸಲಾಗಿತ್ತು. ಅದನ್ನು ತೆರವುಗೊಳಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ‘ ಎಂದು ಪೊಲೀಸರು ತಿಳಿಸಿದ್ದಾರೆ.
‘ಲೊಕೊಪೈಲಟ್‌ನ ಸಮಯಪ್ರಜ್ಞೆಯಿಂದಾಗಿ ಅನಾಹುತವೊಂದು ತಪ್ಪಿದೆ. ಕೂಡಲೇ ಅವರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಕಾನ್ಪುರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ ಎಂದು ಉಪ ಪೊಲೀಸ್ ಕಮಿಷನರ್ ಶ್ರವಣ್ ಕುಮಾರ್ ಸಿಂಗ್ ಹೇಳಿದ್ದಾರೆ.
ಈ ತಿಂಗಳಲ್ಲಿ ರೈಲು ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟಿರುವ ಎರಡನೇ ಘಟನೆ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.