ADVERTISEMENT

ವಿಶಾಖಪಟ್ಟಣದಲ್ಲಿ ಅನಿಲ ಸೋರಿಕೆ ದುರಂತ | ಎಲ್‌ಜಿ ಪಾಲಿಮರ್ಸ್‌ಗೆ ₹ 50 ಕೋಟಿ ದಂಡ

ಪಿಟಿಐ
Published 9 ಮೇ 2020, 1:55 IST
Last Updated 9 ಮೇ 2020, 1:55 IST
   

ನವದೆಹಲಿ: ವಿಶಾಖಪಟ್ಟಣದಲ್ಲಿ ನಡೆದ ಅನಿಲ ಸೋರಿಕೆ ದುರಂತಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಎಲ್‌ಜಿ ಪಾಲಿಮರ್ಸ್‌ ಇಂಡಿಯಾ ಕಂಪನಿಗೆ ₹ 50 ಕೋಟಿ ಮಧ್ಯಂತರ ದಂಡ ವಿಧಿಸಿದೆ.

ನಿಯಮಗಳು ಮತ್ತು ಶಾಸನಬದ್ಧ ನಿರ್ಬಂಧಗಳನ್ನು ಅನುಸರಿಸುವುದರಲ್ಲಿ ಕಂಪನಿ ವತಿಯಿಂದ ಲೋಪವಾಗಿದೆ ಎಂದು ಎನ್‌ಜಿಟಿ ಅಭಿಪ್ರಾಯಪಟ್ಟಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಶುಕ್ರವಾರ 12ಕ್ಕೆ ಏರಿಕೆಯಾಗಿದೆ.

ತನಿಖೆಗೆ ಸಮಿತಿ: ನ್ಯಾಯಮೂರ್ತಿ ಆದರ್ಶ್‌ ಕುಮಾರ್ ಗೋಯೆಲ್‌ ನೇತೃತ್ವದ ಪೀಠವು, ರಾಸಾಯನಿಕ ಕಾರ್ಖಾನೆಯಲ್ಲಿನ ದುರಂತದ ಕುರಿತು ತನಿಖೆ ನಡೆಸಲು ಐವರು ಸದಸ್ಯರ ಸಮಿತಿ ರಚಿಸಿದೆ. ಮೇ 18ರ ಒಳಗೆ ವರದಿ ಸಲ್ಲಿಸಬೇಕು ಎಂದು ಪೀಠವು ಸೂಚಿಸಿದೆ.

ADVERTISEMENT

ಮೇಲ್ನೋಟಕ್ಕೆ ಕಂಡುಬಂದಿರುವ ಸಾರ್ವಜನಿಕ ಪ್ರಾಣಹಾನಿ, ಆರೋಗ್ಯ ಮತ್ತು ಪರಿಸರದ ಮೇಲಿನ ಪ್ರತಿಕೂಲ ಪರಿಣಾಮಗಳನ್ನು ಆಧರಿಸಿ ನಾವು ಸಂಸ್ಥೆಗೆ ಮಧ್ಯಂತರ ಪರಿಹಾರವಾಗಿ ₹ 50 ಕೋಟಿ ಅನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರ ಬಳಿ ಠೇವಣಿ ಇಡಲು ಆದೇಶಿಸುತ್ತಿದ್ದೇವೆ. ಕಂಪನಿಯ ಆರ್ಥಿಕ ಸ್ಥಿತಿ ಮತ್ತು ಆಗಿರುವ ನಷ್ಟ ವಿಶ್ಲೇಷಿಸಿ ಈ ಮೊತ್ತವನ್ನು ನಿಗದಿಪಡಿಸಲಾಗಿದೆ. ಕಂಪನಿಯು ನ್ಯಾಯಮಂಡಳಿಯ ಆದೇಶಕ್ಕೆ ಬದ್ಧವಾಗಿರಬೇಕು ಎಂದು ಪೀಠವು ವಿವರಿಸಿದೆ.

ಕೇಂದ್ರ ಪರಿಸರ ಸಚಿವಾಲಯ, ಎಲ್‌.ಜಿ ಪಾಲಿಮರ್ಸ್ ಇಂಡಿಯಾ ಕಂಪನಿ, ಆಂಧ್ರಪ್ರದೇಶ ರಾಜ್ಯ ಪರಿಸರ ನಿಯಂತ್ರಣ ಮಂಡಳಿ, ಕೇಂದ್ರ ಪರಿಸರ ನಿಯಂತ್ರಣ ಮಂಡಳಿ, ವಿಶಾಖಪಟ್ಟಣದ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ. ಮೇ 18ರಂದು ವಿಚಾರಣೆ ನಿಗದಿಪಡಿಸಿದ್ದು, ಆ ದಿನದ ಒಳಗೆ ಉತ್ತರ ನೀಡುವಂತೆಯೂ ಆದೇಶಿಸಿದೆ.

ಸಮಿತಿ ಸದಸ್ಯರು: ಆಂಧ್ರಪ್ರದೇಶ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳಾದ ಬಿ.ಶೇಷಶಯನ ರೆಡ್ಡಿ, ವಿ. ರಾಮಚಂದ್ರಮೂರ್ತಿ,ಆಂಧ್ರಪ್ರದೇಶ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಪುಲಿಪಟಿ ಕಿಂಗ್, ಆಂಧ್ರ ವಿಶ್ವವಿದ್ಯಾಲಯದ ರಾಸಾಯನಿಕ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ಸಿಪಿಸಿಬಿ ಸದಸ್ಯ ಕಾರ್ಯದರ್ಶಿ ಸಮಿತಿಯ ಸದಸ್ಯರಾಗಿದ್ದಾರೆ.

ಶೇ 60ರಷ್ಟು ಅನಿಲ ಸೋರಿಕೆ
ಅಮರಾವತಿ: ವಿಶಾಖಪಟ್ಟಣದ ಎಲ್‌.ಜಿ ಪಾಲಿಮರ್ಸ್‌ ಕಾರ್ಖಾನೆಯ ಟ್ಯಾಂಕ್‌ನಿಂದ ಶೇ 60ರಷ್ಟು ಸ್ಟೈರೇನ್‌ ವೇಪೊರ್ ಅನಿಲ ಸೋರಿಕೆಯಾಗಿದೆ. ಈಗ ಕಾರ್ಖಾನೆಯ ಎಲ್ಲ ಟ್ಯಾಂಕ್‌ಗಳು ಸುರಕ್ಷಿತವಾಗಿವೆ ಎಂದು ಜಿಲ್ಲಾಧಿಕಾರಿ ವಿ.ವಿನಯ್‌ ಚಂದ್‌ ಶುಕ್ರವಾರ ತಿಳಿಸಿದ್ದಾರೆ.

ಮತ್ತೊಮ್ಮೆ ಸೋರಿಕೆ ಆಗಿಲ್ಲ: ಎನ್‌ಡಿಆರ್‌ಎಫ್‌
ನವದೆಹಲಿ: ‘ವಿಶಾಖಪಟ್ಟಣದಲ್ಲಿ ಎರಡನೇ ಬಾರಿ ಅನಿಲ ಸೋರಿಕೆ ಉಂಟಾಗಿಲ್ಲ. ತಜ್ಞರು ಅಗತ್ಯ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದಾರೆ’ ಎಂದು ಎನ್‌ಡಿಆರ್‌ಎಫ್‌ ಮುಖ್ಯಸ್ಥ ಎಸ್‌.ಎನ್.‌ ಪ್ರಧಾನ್ ಶುಕ್ರವಾರ‌ ತಿಳಿಸಿದ್ದಾರೆ.

ತಾಂತ್ರಿಕ ‌ಸಮಸ್ಯೆಯಿಂದಾಗಿ ಕಾರ್ಖಾನೆಯಿಂದ ಹೊಗೆ ಬರುತ್ತಿದೆ. ಅದಕ್ಕೆ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.