ಗುವಾಹಟಿ: ‘ದೇಶದಲ್ಲಿ ಬಂಧನ ಕೇಂದ್ರಗಳಿಲ್ಲ,’ ಎಂಬ ನರೇಂದ್ರ ಮೋದಿ ಹೇಳಿಕೆಗೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಬಂಧನ ಕೇಂದ್ರಗಳ ಕಲ್ಪನೆ ಮೊದಲ ಬಾರಿಗೆ ಬಂದಿದ್ದುವಾಜಪೇಯಿ ಅವರ ಅವಧಿಯಲ್ಲಿ. ಸ್ವತಃ ಮೋದಿ ಸರ್ಕಾರವೇ ಅಸ್ಸಾಂನಲ್ಲಿ ಬೃಹತ್ ಬಂಧನ ಕೇಂದ್ರ ನಿರ್ಮಾಣಕ್ಕೆ ₹46 ಕೋಟಿ ಅನುಧಾನ ನೀಡಿತ್ತು,’ಎಂದು ಹೇಳಿದ್ದಾರೆ.
ಈ ಕುರಿತು ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ತರುಣ್ ಗೊಗೋಯ್, ‘ಭಾರತದ ಒಳಗೆ ಅಕ್ರಮವಾಗಿ ನುಸುಳಿದವರು ಜೈಲು ಶಿಕ್ಷೆ ಅನುಭವಿಸಿದ ನಂತರ ಅವರನ್ನು ಒಂದೆಡೆ ಇರಿಸಲು ಬಂಧನ ಕೇಂದ್ರಗಳನ್ನು ನಿರ್ಮಿಸುವ ಪ್ರಥಮ ಆಲೋಚನೆ ಬಂದಿದ್ದು ವಾಜಪೇಯಿ ಸರ್ಕಾರದಲ್ಲಿ. ಮೋದಿ ಅವರು ಪ್ರಧಾನಿಯಾದ ಬಳಿಕ 3 ಸಾವಿರ ಮಂದಿಯ ಸಾಮರ್ಥ್ಯದ ಬೃಹತ್ ಬಂಧನ ಕೇಂದ್ರ ನಿರ್ಮಿಸಲು ₹46 ಕೋಟಿ ಅನುದಾನ ಪೂರೈಸಲಾಗಿತ್ತು. ಹೀಗಿದ್ದೂ, ದೇಶದಲ್ಲಿ ಬಂಧನ ಕೇಂದ್ರಗಳಿಲ್ಲ ಎಂದು ಹೇಳಲು ಮೋದಿ ಅವರಿಗೆ ಹೇಗೆ ಸಾಧ್ಯವಾಯಿತು?’ ಎಂದು ಗೊಗೋಯ್ ಪ್ರಶ್ನಿಸಿದ್ದಾರೆ.
ಇದೇ ವಿಚಾರವನ್ನು ತಮ್ಮ ಟ್ವಿಟರ್‌ನಲ್ಲಿಯೂ ಹೇಳಿರುವ ಗೊಗೋಯ್, ‘ಅಸ್ಸಾಂ ಹೈಕೋರ್ಟ್ ನಿರ್ದೇಶನದ ಮೇರೆಗೆ 2009ರಲ್ಲಿ ರಾಜ್ಯದಲ್ಲಿ ಬಂಧನ ಕೇಂದ್ರವನ್ನು ನಿರ್ಮಿಸಲಾಗಿತ್ತು. ಇದರ ಬೆನ್ನಿಗೇ, ಗೋಲ್ಪಾರ ಎಂಬಲ್ಲಿ 3 ಸಾವಿರ ವಲಸಿಗರ ಸಾಮರ್ಥ್ಯದ ಬೃಹತ್ ಬಂಧನ ಕೇಂದ್ರ ನಿರ್ಮಿಸಲು 2018ರಲ್ಲಿ ನರೇಂದ್ರ ಮೋದಿ ಸರ್ಕಾರ ₹46.41 ಕೋಟಿ ಬಿಡುಗಡೆ ಮಾಡಿತ್ತು,’ ಎಂದು ಅವರು ಹೇಳಿದ್ದಾರೆ.
ಮುಂಬರುವ ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಡಿ. 22ರಂದು ರಾಷ್ಟ್ರ ರಾಜಧಾನಿಯಲ್ಲಿ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ‘ಕಾಂಗ್ರೆಸ್ಸಿಗರು, ನಗರ ನಕ್ಸಲರು ಹೇಳುತ್ತಿರುವಂತೆ ದೇಶದಲ್ಲಿ ಡಿಟೆನ್ಷನ್ ಸೆಂಟರ್ (ಬಂಧನ ಕೇಂದ್ರ) ಇಲ್ಲ,’ ಎಂದಿದ್ದರು.
‘ಭಾರತದ ಮಣ್ಣಿನಲ್ಲಿರುವ ಮುಸ್ಲಿಮರು ಭಾರತಮಾತೆಯ ಸಂತಾನ. ಅವರ ಮೇಲೆ ಪೌರತ್ವ ಕಾನೂನು, ಎನ್‌ಆರ್‌ಸಿ ಅನ್ವಯವಾಗುವುದಿಲ್ಲ. ಭಾರತದಲ್ಲಿ ಬಂಧನ ಕೇಂದ್ರಗಳಿಲ್ಲ. ಮುಸ್ಲಿಮರನ್ನು ಅಲ್ಲಿಗೆ ಕಳಿಸುವ ಬಗ್ಗೆ ನಾನು ಯೋಚನೆಯನ್ನೂ ಮಾಡಿಲ್ಲ. ದೇಶದ ಎಲ್ಲ ಮುಸ್ಲಿಮರನ್ನು ಬಂಧನ ಗೃಹಗಳಿಗೆ ಕಳುಹಿಸಲಾಗುತ್ತದೆ ಎಂದು ಕಾಂಗ್ರೆಸ್ ಮತ್ತು ಅದರ ಸಹಚರರು, ನಗರಗಳಲ್ಲಿ ವಾಸಿಸುವ ಕೆಲ ನಕ್ಸಲರು ಹೇಳುತ್ತಿದ್ದಾರೆ. ಆದರೆ, ದೇಶದಲ್ಲಿ ಬಂಧನ ಕೇಂದ್ರಗಳು ಎಲ್ಲಿವೆ? ಇನ್ನಾದರೂ ಸರಿಯಾಗಿ ಓದಿಕೊಳ್ಳಿ. ನಂತರ ಮಾತನಾಡಿ. ಕಾಂಗ್ರೆಸ್ ಮತ್ತು ನಗರ ನಕ್ಸಲರು ಹೇಳುತ್ತಿರುವ ಬಂಧನ ಕೇಂದ್ರ ಸಂಪೂರ್ಣ ಸುಳ್ಳು. ಅದನ್ನು ನಂಬಬೇಡಿ. ಅದು ಸುಳ್ಳು ಸುಳ್ಳು ಸುಳ್ಳು,’ ಎಂದಿದ್ದರು.
ತರುಣ್ ಗೊಗೋಯ್ ಅವರು2001 ರಿಂದ 2016ರ ವರೆಗೆ ಅಸ್ಸಾಂನ ಮುಖ್ಯಮಂತ್ರಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.