ADVERTISEMENT

ಪಾಕಿಸ್ತಾನದಿಂದ ಬಂದ ಮಹಿಳೆ 8ನೇ ತರಗತಿ ಪಾಸ್; ಸರ್ಕಾರಿ ನೌಕರಿ ನಿರೀಕ್ಷೆ

ಪಿಟಿಐ
Published 24 ಜುಲೈ 2024, 11:49 IST
Last Updated 24 ಜುಲೈ 2024, 11:49 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಇಂದೋರ್‌: 2015ರಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಮರಳಿರುವ ವಾಕ್‌–ಶ್ರವಣ ದೋಷವುಳ್ಳ ಮಹಿಳೆ ಗೀತಾ ಅವರು 8ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಸರ್ಕಾರಿ ನೌಕರಿಯ ನಿರೀಕ್ಷೆಯಲ್ಲಿದ್ದಾರೆ.

ಮಧ್ಯಪ್ರದೇಶ ರಾಜ್ಯ ಮುಕ್ತ ಶಾಲಾ ಪರೀಕ್ಷಾ ಮಂಡಳಿ ನಡೆಸಿದ್ದ 8ನೇ ತರಗತಿ ಪರೀಕ್ಷೆಯಲ್ಲಿ, ಗೀತಾ ಅವರು 600ಕ್ಕೆ 411 ಅಂಕ ಗಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪಾಕಿಸ್ತಾನದಿಂದ ಮರಳಿದ ಬಳಿಕ ಗೀತಾ ಅವರು ಮುಖ್ಯವಾಹಿನಿಗೆ ಬರಲು ಇಂದೋರ್‌ ಮೂಲದ ಸರ್ಕಾರೇತರ ಸಂಸ್ಥೆ (ಎನ್‌ಜಿಒ) 'ಆನಂದ್‌ ಸರ್ವೀಸ್‌ ಸೊಸೈಟಿ' ನೆರವಾಗಿದೆ.

ಎನ್‌ಜಿಒ ಕಾರ್ಯದರ್ಶಿ ಹಾಗೂ ಸಂಕೇತ ಭಾಷಾ ತಜ್ಞರಾದ ಜ್ಞಾನೇಂದ್ರ ಪುರೋಹಿತ್‌ ಅವರು, 'ಪರೀಕ್ಷಾ ಫಲಿತಾಂಶದಿಂದಾಗಿ ಸಂಭ್ರಮದಲ್ಲಿರುವ ಗೀತಾ, ಭವಿಷ್ಯ ಕಟ್ಟಿಕೊಳ್ಳುವ ಖಾತರದಲ್ಲಿದ್ದಾರೆ' ಎಂದು ಪಿಟಿಐಗೆ ತಿಳಿಸಿದ್ದಾರೆ.

ವಿಡಿಯೊ ಕರೆ ವೇಳೆ ಗೀತಾ ಅವರು, ಸರ್ಕಾರಿ ಉದ್ಯೋಗ ಮಾಡುತ್ತಾ ವಿದ್ಯಾಭ್ಯಾಸ ಮುಂದುವರಿಸಲು ಉತ್ಸುಕರಾಗಿರುವುದಾಗಿ ಸನ್ನೆ ಮೂಲಕ ಪುರೋಹಿತ್‌ ಅವರಿಗೆ ಹೇಳಿದ್ದಾರೆ.

'ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗ್ರೂಪ್‌ 'ಡಿ' ನೌಕರಿ ಗಿಟ್ಟಿಸಲು ಕನಿಷ್ಠ 8ನೇ ತರಗತಿ ತೇರ್ಗಡೆಯಾಗಿರಬೇಕು. ಈ ವಿಭಾಗದಲ್ಲಿ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಗೀತಾ ಅರ್ಹರಾಗಿದ್ದಾರೆ' ಎಂದು ಪುರೋಹಿತ್‌ ತಿಳಿಸಿದ್ದಾರೆ.

ಗೀತಾ ಅವರ ನಿಜವಾದ ಹೆಸರು ರಾಧಾ. ಸದ್ಯ ಅವರು ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರ ಜಿಲ್ಲೆಯಲ್ಲಿ ತಮ್ಮ ತಾಯಿ ಮೀನಾ ಪಂಢ್ರೆ ಅವರೊಂದಿಗೆ ಇದ್ದಾರೆ. ಅವರ ಕುಟುಂಬ ಬಡತನದಲ್ಲಿದೆ. ಆರ್ಥಿಕವಾಗಿ ಸ್ವತಂತ್ರರಾಗುವ ಸಲುವಾಗಿ ಗೀತಾ ಕೆಲಸ ಮಾಡಲು ಬಯಸಿದ್ದಾರೆ. ಸದ್ಯಕ್ಕೆ ಮದುವೆಯಾಗುವ ಯೋಚನೆ ಅವರಿಗೆ ಇಲ್ಲ ಎಂದೂ ಪುರೋಹಿತ್‌ ಮಾಹಿತಿ ನೀಡಿದ್ದಾರೆ.

ಗೀತಾ ಅವರಿಗೆ 33 ವರ್ಷವಿರಬಹುದು ಎಂದು ಅಂದಾಜಿಸಲಾಗಿದೆ. ಅವರು 23 ವರ್ಷಗಳ ಹಿಂದೆ 'ಸಮ್ಜೋತ ಎಕ್ಸ್‌ಪ್ರೆಸ್‌' ರೈಲಿನ ಮೂಲಕ ಆಕಸ್ಮಿಕವಾಗಿ ಪಾಕಿಸ್ತಾನ ಗಡಿ ಪ್ರವೇಶಿಸಿದ್ದರು.

ಲಾಹೋರ್‌ನ ನಿಲ್ದಾಣದಲ್ಲಿದ್ದ ಅವರನ್ನು ಬಿಲ್ಕಿಸ್‌ ಇಧಿ ಅವರ ಸರ್ಕಾರೇತರ ಸಂಸ್ಥೆ 'ಇಧಿ ಫೌಂಡೇಷನ್‌' ದತ್ತು ಪಡೆದು, ಕರಾಚಿಗೆ ಕರೆದೊಯ್ದಿತ್ತು.

ಮಾಜಿ ವಿದೇಶಾಂಗ ಸಚಿವೆ ದಿ. ಸುಷ್ಮಾ ಸ್ವರಾಜ್ ಅವರ ಪ್ರಯತ್ನದ ಫಲವಾಗಿ ಗೀತಾ ಅವರು 2015ರ ಅಕ್ಟೋಬರ್‌ 26ರಂದು ಭಾರತಕ್ಕೆ ಮರಳಿದ್ದರು. ನಂತರ ಅವರನ್ನು ಇಂದೋರ್‌ನ ಎನ್‌ಜಿಒದ ವಸತಿ ಸಮುಚ್ಚಯಕ್ಕೆ ಕಳುಹಿಸಲಾಗಿತ್ತು. 2021ರಲ್ಲಿ ಕುಟುಂಬದವರು ಪತ್ತೆಯಾದ ಬಳಿಕ, ಗೀತಾ ಮಹಾರಾಷ್ಟ್ರದಲ್ಲಿ ಬದುಕುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.