ಜೈಪುರ: ‘ರಾಹುಲ್ ಗಾಂಧಿಯವರು ಹೇಳಿದ ಮೇಲೆ ಮುಗಿಯಿತು‘ – ತಾವು ಹಾಗೂ ಸಚಿನ್ ಪೈಲಟ್ ಕಾಂಗ್ರೆಸ್ ಪಕ್ಷದ ಆಸ್ತಿಗಳು ಎಂದು ರಾಹುಲ್ ಗಾಂಧಿ ಹೇಳಿದ್ದಾರಲ್ವಾ ಎನ್ನುವ ಪ್ರಶ್ನೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಉತ್ತರಿಸಿದ ರೀತಿಯಿದು.
‘ಇದು ನಮ್ಮ ಪಕ್ಷದ ಸೌಂದರ್ಯ. ಹಿರಿಯ ನಾಯಕರು ಹೇಳಿದ ಮೇಲೆ ಮುಗಿಯಿತು. ಮುಂದಿನ ಚರ್ಚೆಗೆ ಅವಕಾಶ ಇಲ್ಲ‘ ಎಂದು ಗೆಹಲೋತ್ ಹೇಳಿದ್ದಾರೆ.
ಕಳೆದ ವಾರ ‘ಎನ್‌ಡಿಟಿವಿ‘ ಸುದ್ಸಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಸಚಿನ್ ಪೈಲಟ್ ಅವರನ್ನು ‘ದ್ರೋಹಿ‘ ಎಂದು ಗೆಹಲೋತ್ ಕರೆದಿದ್ದರು. ‘ಹಿರಿಯರಾದವರು ಈ ರೀತಿ ಮಾತನಾಡಬಾರದು‘ ಎಂದು ಸಚಿನ್ ಪೈಲಟ್ ತಿರುಗೇಟು ನೀಡಿದ್ದರು. ಎರಡೂ ಬಣಗಳ ಜಗಳ ಕಾಂಗ್ರೆಸ್‌ನಲ್ಲಿ ಭಾರಿ ಸಂಚಲನ ಉಂಟು ಮಾಡಿತ್ತು.
ರಾಜಸ್ಥಾನ ಕಾಂಗ್ರೆಸ್ ನಾಯಕರ ಗುದ್ದಾಟದ ಬಗ್ಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ರಾಹುಲ್ ಗಾಂಧಿ, ‘ಅವರಿಬ್ಬರೂ ಪಕ್ಷದ ಆಸ್ತಿಗಳು‘ ಎಂದು ಹೇಳಿದ್ದರು.
‘ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಕೂಡ ಆಸ್ತಿ ಎನ್ನುವುದನ್ನು ರಾಹುಲ್ ಗಾಂಧಿ ಹೇಳಿದ್ದಾರೆ. ರಾಜ್ಯದಲ್ಲಿ ಭಾರತ್ ಜೋಡೊ ಯಾತ್ರೆಯನ್ನು ಯಶಸ್ವಿಗೊಳಿಸುತ್ತೇವೆ. ನಮ್ಮ ಮುಂದಿರುವ ಮುಖ್ಯ ವಿಷಯ 2023ರ ಚುನಾವಣೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ‘ ಎಂದು ಗೆಹಲೋತ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.