ಜೈಪುರ: ಸೀಕರ್‌ನಲ್ಲಿ ಆಯೋಜನೆಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಷಣವನ್ನು ಪ್ರಧಾನಿ ಕಾರ್ಯಾಲಯ ರದ್ದುಪಡಿಸಿರುವುದಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿವಿಧ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುತ್ತಿದ್ದಾರೆ. ‘ಈ ಕಾರ್ಯಕ್ರಮದಲ್ಲಿ ಗೆಹಲೋತ್ ಪಾಲ್ಗೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಅವರು ಬಂದರೆ ಸ್ವಾಗತ’ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.
ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಗೆಹಲೋತ್, ‘ನಾನು ನನ್ನ ಮಾತಿನ ಮೂಲಕ ಪ್ರಧಾನಿಯನ್ನು ಸ್ವಾಗತಿಸಲು ಸಾಧ್ಯವಾಗದ ಕಾರಣ. ಟ್ವೀಟ್ ಮೂಲಕವೇ ಮೋದಿಯನ್ನು ಸ್ವಾಗತಿಸುತ್ತಿದ್ದೇನೆ’ ಎಂದಿದ್ದಾರೆ.
‘ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ... ಇಂದು ನೀವು ರಾಜಸ್ಥಾನಕ್ಕೆ ಭೇಟಿ ನೀಡುತ್ತಿದ್ದೀರಿ. ಮೊದಲೇ ನಿಗದಿಯಾಗಿದ್ದ ನನ್ನ ಮೂರು ನಿಮಿಷಗಳ ಭಾಷಣವನ್ನು ನಿಮ್ಮ ಕಚೇರಿ ರದ್ದುಪಡಿಸಿದೆ. ಹೀಗಾಗಿ ನನ್ನ ಮಾತಿನ ಮೂಲಕ ನಿಮ್ಮನ್ನು ಸ್ವಾಗತಿಸಲು ಸಾಧ್ಯವಾಗುತ್ತಿಲ್ಲ. ನಿಮಗೆ ರಾಜಸ್ಥಾನಕ್ಕೆ ನಮ್ಮ ಹೃದಯಪೂರ್ವಕ ಸ್ವಾಗತವನ್ನು ಟ್ವೀಟ್ ಮೂಲಕ ತಿಳಿಸುತ್ತಿದ್ದೇನೆ’ ಎಂದಿದ್ದಾರೆ.
ಗೆಹಲೋತ್ ಟ್ವಿಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿ ಕಾರ್ಯಾಲಯ, ‘ರಾಜ್ಯದಲ್ಲಿನ ಪ್ರಧಾನಿ ಅವರ ಕಾರ್ಯಕ್ರಮಕ್ಕೆ ನಿಮಗೆ ಸದಾ ಸ್ವಾಗತವಿದೆ. ಸೀಕರ್‌ನಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಅದು ಅತ್ಯಂತ ಮೌಲ್ಯಯುತ’ ಎಂದು ಹೇಳಿದೆ.
‘ಕಾರ್ಯಕ್ರಮದಲ್ಲಿ ನೀವು ಪಾಲ್ಗೊಳ್ಳುತ್ತಿಲ್ಲ ಎಂಬ ಮಾಹಿತಿ ಬಂದಿದ್ದರಿಂದ, ನಿಗದಿಯಾಗಿದ್ದ ನಿಮ್ಮ ಭಾಷಣವನ್ನು ರದ್ದುಪಡಿಸಬೇಕಾಯಿತು. ಮೋದಿ ಅವರ ಈ ಹಿಂದಿನ ಕಾರ್ಯಕ್ರಮಗಳಲ್ಲೂ ನಿಮ್ಮನ್ನು ಆಹ್ವಾನಿಸಲಾಗಿತ್ತು. ನೀವೂ ಬಂದಿದ್ದಿರಿ. ಆದಾಗ್ಯೂ ನಿಮ್ಮ ಹೆಸರು ವೇದಿಕೆಯ ಫಲಕದಲ್ಲಿ ಹಾಗೂ ಅಭಿವೃದ್ಧಿ ಕಾರ್ಯಗಳ ಫಲಕಗಳಲ್ಲೂ ಇದೆ. ಇತ್ತೀಚಿನ ಅಪಘಾತದಲ್ಲಿ ಗಾಯಗೊಂಡಿರುವ ನೀವು ವೈಕ್ತಿಕವಾಗಿ ಪಾಲ್ಗೊಳ್ಳಲು ಸಾದ್ಯವಾಗದಿದ್ದರೂ, ನಿಮ್ಮ ಆಗಮನ ಅತ್ಯಂತ ಮೌಲ್ಯಯುತ’ ಎಂದು ಹೇಳಲಾಗಿದೆ.
ಸೀಕರ್ ಭೇಟಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 1.25ಲಕ್ಷ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಯೂರಿಯಾ ಗೋಲ್ಡ್‌ಗೆ ಚಾಲನೆ ನೀಡಲಿದ್ದಾರೆ. ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಉದಯಪುರ, ಬನಸ್ವಾರಾ, ಪ್ರತಾಪಘಡ್ ಹಾಗೂ ಡುಂಗರಾಪುರ್ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿರುವ 6 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಉದ್ಘಾಟಿಸಲಿದ್ದಾರೆ. ತಿವಾರಿ, ಜೋಧಪುರ್‌ನಲ್ಲಿ ಸ್ಥಾಪಿಸಲಾಗಿರುವ ಕೇಂದ್ರೀಯ ವಿದ್ಯಾಲಯಗಳನ್ನೂ ಲೋಕಾರ್ಪಣೆಗೊಳಿಸಲಿದ್ದಾರೆ.
‘ಭಾಷಣಕ್ಕೆ ಅವಕಾಶ ನೀಡಿದ್ದರೆ ಅಲ್ಲಿ ರಾಜ್ಯದ ಬೇಡಿಕೆಗಳ ಪಟ್ಟಿಯನ್ನು ಪ್ರಧಾನಿ ಮುಂದಿಡುವೆ. ಬಹುಷಃ ಈ ಒಂದು ತಿಂಗಳಲ್ಲಿನ (ಈಗಾಗಲೇ ಪ್ರಧಾನಿಯ ಆರು ಕಾರ್ಯಕ್ರಮಗಳು ನಡೆದಿವೆ) ಏಳನೇ ಕಾರ್ಯಕ್ರಮದಲ್ಲಿ ಅವುಗಳ ಜಾರಿಗೆ ಕ್ರಮ ವಹಿಸುವ ವಿಶ್ವಾಸವಿದೆ’ ಎಂದು ಗೆಹಲೋತ್ ಹೇಳಿದ್ದಾರೆ.
‘ಭೂಸೇನೆ, ವಾಯುಸೇನೆ ಹಾಗೂ ಜಲ ಸೇನೆಯಲ್ಲಿ ಯೋಧರ ಆಯ್ಕೆಗೆ ಸದ್ಯ ಜಾರಿಯಲ್ಲಿರುವ ಅಗ್ನವೀರ ಯೋಜನೆಯನ್ನು ಕೈಬಿಡಬೇಕು. ರಾಜಸ್ಥಾನದಲ್ಲಿನ 21 ಲಕ್ಷ ರೈತರ ಸಹಕಾರಿ ಬ್ಯಾಂಕ್‌ನಲ್ಲಿದ್ದ ₹15 ಸಾವಿರ ಕೋಟಿ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದೆ. ಹಾಗೆಯೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಒಂದು ಬಾರಿ ಮನ್ನಾ ಮಾಡಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಗೆಹಲೋತ್ ಒತ್ತಾಯಿಸಿದ್ದಾರೆ.
‘ಜಾತಿ ಜನಗಣತಿಗೆ ನಡೆಸುವ ಮಸೂದೆಯನ್ನು ರಾಜಸ್ಥಾನ ವಿಧಾನಸಭೆ ಅಂಗೀಕರಿಸಿ ಕೇಂದ್ರದ ಸಮ್ಮತಿಗೆ ಕಳುಹಿಸಲಾಗಿದೆ. ಇದರಲ್ಲಿ ಯಾವುದೇ ವಿಳಂಬ ಮಾಡದೆ ಕೇಂದ್ರ ತನ್ನ ನಿರ್ಧಾರವನ್ನು ಪ್ರಕಟಿಸಬೇಕು. ಜತೆಗೆ ಪೂರ್ವ ರಾಜಸ್ಥಾನದಲ್ಲಿನ ನಾಲಾ ಯೋಜನೆಗೆ ರಾಷ್ಟ್ರೀಯ ಯೋಜನೆ ಸ್ಥಾನಮಾನ ನೀಡಬೇಕು’ ಎಂದು ಗೆಹಲೋತ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.