ನವದೆಹಲಿ: ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ವಾಯುಪಡೆಯ ಎಂಐ–17ವಿ5 ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ಕೂನೂರಿನ ಸಮೀಪ ಪತನಗೊಂಡಿದೆ. ಈ ವೇಳೆ ಹೆಲಿಕಾಪ್ಟರ್‌ನಲ್ಲಿದ್ದ ರಾವತ್, ಅವರ ಪತ್ನಿ ಸೇರಿ 13ಮಂದಿ ಸಾವಿಗೀಡಾಗಿದ್ದಾರೆ ಎಂದು ಭಾರತೀಯ ವಾಯುಪಡೆ ದೃಢಪಡಿಸಿದೆ.
ಬಿಪಿನ್ ರಾವತ್ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ನಿತಿನ್ ಗಡ್ಕರಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಇದಕ್ಕೂ ಮುನ್ನ ರಾವತ್ ಸುರಕ್ಷಿತವಾಗಿರಲೆಂದು ಎಲ್ಲ ನಾಯಕರು ಪ್ರಾರ್ಥಿಸಿದ್ದರು.
'ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ಪತನದಲ್ಲಿ ಸಾವಿಗೀಡಾಗಿರುವ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಸೇನಾ ಪಡೆಯ ಇತರರು ಸಾವಿಗೀಡಾಗಿರುವುದಕ್ಕೆ ನಾನು ತೀವ್ರ ದುಃಖಿತನಾಗಿದ್ದೇನೆ. ಅವರು ಭಾರತಕ್ಕೆ ಅತ್ಯಂತ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದರು. ದುಃಖಿತ ಕುಟುಂಬಗಳಿಗೆ ನನ್ನ ಸಂತಾಪಗಳು' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, 'ಬಿಪಿನ್ ರಾವತ್ ಅಪ್ರತಿಮ ಯೋಧರಾಗಿದ್ದರು. ನಿಜ ಅರ್ಥದ ರಾಷ್ಟ್ರಭಕ್ತರಾಗಿದ್ದ ಅವರು, ನಮ್ಮ ಸೇನಾಪಡೆಗಳು ಮತ್ತು ಭದ್ರತಾ ಸಲಕರಣೆಗಳನ್ನು ಆಧುನೀಕರಣಗೊಳಿಸಲು ಬಹಳ ಕೊಡುಗೆ ನೀಡಿದ್ದಾರೆ. ಕಾರ್ಯತಂತ್ರದ ವಿಚಾರಗಳ ಬಗ್ಗೆ ಅವರ ಒಳನೋಟಗಳು ಮತ್ತು ದೃಷ್ಟಿಕೋನಗಳು ಅಸಾಧಾರಣವಾಗಿದ್ದವು. ಅವರ ಅಗಲಿಕೆ ನನಗೆ ಅತೀವ ದುಃಖವನ್ನುಂಟು ಮಾಡಿದೆ' ಎಂದು ಮೋದಿ ತಿಳಿಸಿದ್ದಾರೆ.
'ಜನರಲ್ ಬಿಪಿನ್ ರಾವತ್ ಅವರ ಅಗಲಿಕೆಯ ಸುದ್ದಿಯನ್ನು ಕೇಳಿ ನನಗೆ ಆಘಾತವಾಗಿದೆ. ದೇಶವು ತನ್ನ ಕೆಚ್ಚೆದೆಯ ಮಗನನ್ನು ಕಳೆದುಕೊಂಡಿದೆ. ನಾಲ್ಕು ದಶಕಗಳ ಕಾಲ ದೇಶಕ್ಕೆ ಅವರು ನೀಡಿದ ಸ್ವಾರ್ಥರಹಿತ ಸೇವೆಯು ಶ್ಲಾಘನೀಯ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು' ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್ ಮಾಡಿದ್ದು, 'ಐಎಎಫ್ ಹೆಲಿಕಾಪ್ಟರ್ ಪತನದಲ್ಲಿ ಸಾವಿಗೀಡಾದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿದಂತೆ ಇತರೆ 12 ಮಂದಿಯ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಸಿಡಿಎಸ್ ಅಪ್ರತಿಮ ಯೋಧರಾಗಿದ್ದರು. ತಾಯಿನಾಡಿಗೆ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಅವರ ಅನುಕರಣೀಯ ಕೊಡುಗೆಗಳು ಮತ್ತು ಹೊಣೆಗಾರಿಕೆ'ಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
'ಹೆಲಿಕಾಪ್ಟರ್ ಪತನದಲ್ಲಿ ಸಾವಿಗೀಡಾದ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಕುಟುಂಬಕ್ಕೆ ನನ್ನ ಸಂತಾಪಗಳು. ಇದು ನಿರೀಕ್ಷಿಸಿರಲಾರದ ದುರಂತವಾಗಿದೆ ಮತ್ತು ಈ ಕಷ್ಟದ ಸಮಯದಲ್ಲಿ ಅವರ ಕುಟುಂಬದೊಂದಿಗೆ ನಾವಿದ್ದೇವೆ. ದುರಂತದಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ನನ್ನ ಸಂತಾಪಗಳು. ಈ ನೋವಿನಲ್ಲಿ ಭಾರತವು ಒಂದಾಗಿ ನಿಲ್ಲಲಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇನ್ನುಳಿದಂತೆ ಹೆಲಿಕಾಪ್ಟರ್ ಪತನದಲ್ಲಿ ದುರಂತ ಅಂತ್ಯ ಕಂಡ ಬಿಪಿನ್ ರಾವತ್ ಸೇರಿದಂತೆ ಎಲ್ಲರಿಗೂ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯ, ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವು ನಾಯಕರು ಅಗಲಿದವರಿಗೆ ಸಂತಾಪ ಸೂಚಿಸಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.