ನವದೆಹಲಿ: ಆರು ವರ್ಷಗಳ ಹಿಂದೆ ಅಂದರೆ 2015ರಲ್ಲಿ ನಾಗಾಲ್ಯಾಂಡ್‌ನಲ್ಲಿ ಸಂಭವಿಸಿದ ಚೀತಾ ಹೆಲಿಕಾಪ್ಟರ್ ಅಪಘಾತದಲ್ಲಿ ಪಾರಾಗಿ ಬಂದಿದ್ದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ಎರಡನೇ ಬಾರಿಯೂ ಅದೃಷ್ಟ ಒಲಿಯಲಿಲ್ಲ.
ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಬುಧವಾರ ಸಂಭವಿಸಿದ ಹೆಲಿಕಾಪ್ಟರ್ ದುರಂತ ರಾವತ್, ಅವರ ಪತ್ನಿ ಮಧುಲಿಕಾ ಮತ್ತು ಇತರ 12 ಮಂದಿಯನ್ನು ಬಲಿ ಪಡೆಯಿತು.
ಸದಾ ನಗುಮೊಗದ ಸೈನಿಕರಾಗಿದ್ದ ಜನರಲ್ ಬಿಪಿನ್ ರಾವತ್ ಅವರು ದೇಶದಲ್ಲಿ ಉನ್ನತ ರಕ್ಷಣಾ ವಿಭಾಗದಲ್ಲಿ ಸುಧಾರಣೆ ಆರಂಭಿಸಿದ ಸಾಹಸಿ. ಹೊಸದಾಗಿ ಸೃಷ್ಟಿಸಲಾದ ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕಗೊಂಡ ಅವರು, ಬಹಳ ಮಹತ್ವದ ಸುಧಾರಣಾ ಕ್ರಮಗಳನ್ನು ಕೈಗೆತ್ತಿಕೊಂಡಿದ್ದರು. ಅದು ಹಂತ ಹಂತವಾಗಿ ಜಾರಿಗೆ ಬರುವ ಹಂತದಲ್ಲೇ ಮಹಾನ್ ಸೇನಾ ನಾಯಕ ಇನ್ನಿಲ್ಲವಾಗಿದ್ದಾರೆ.
ಕಳೆದ ವರ್ಷ ಜನವರಿ 1ರಂದು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದ ರಾವತ್ ಅವರು, ಸೇನೆ, ವಾಯುಪಡೆ ಮತ್ತು ನೌಕಾಪಡೆಗಳ ಹಾಲಿ ಕಮಾಂಡ್‌ಗಳನ್ನು ಒಗ್ಗೂಡಿಸುವ ಪ್ರಕ್ರಿಯೆ ಆರಂಭಿಸಿದ್ದರು. ಅತ್ಯುತ್ತಮ ಕಾರ್ಯಾಚರಣೆ ಅಗತ್ಯಗಳು ಮತ್ತು ದುಬಾರಿ ಸೇನಾ ಉಪಕರಣಗಳ ಖರೀದಿಯನ್ನು ಸುಗಮಗೊಳಿಸುವುದಕ್ಕಾಗಿ ಮೂರೂ ಪಡೆಗಳನ್ನು ಒಳಗೊಂಡ ಏಕೀಕೃತ ಕಮಾಂಡ್‌ಗಳನ್ನು ಸೃಷ್ಟಿಸುವ ಹಾದಿಯಲ್ಲಿದ್ದರು.
ಸದ್ಯ ದೇಶದಲ್ಲಿ ಸೇನಾಪಡೆಗೆ 7 ಕಮಾಂಡ್‌ಗಳು, ನೌಕಾಪಡೆಗೆ 3 ಹಾಗೂ ವಾಯುಪಡೆಗೆ 7 ಕಮಾಂಡ್‌ಗಳಿವೆ. ಇವುಗಳ ಬದಲಿಗೆ ದೇಶದ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಒಂದೊಂದು ಏಕೀಕೃತ ಕಮಾಂಡ್‌ಗಳನ್ನು ರಚಿಸುವುದು ಹಾಗೂ ಚೀನಾ ಮತ್ತು ಪಾಕಿಸ್ತಾನಗಳ ಸಮೀಪ ಇರುವ ಕಾರಣಕ್ಕೆ ಈಗಾಗಲೇ ಇರುವ ಉತ್ತರ ಕಮಾಂಡ್ ಅನ್ನು ಹಾಗೆಯೇ ಉಳಿಸಿಕೊಳ್ಳುವುದು ಜನರಲ್ ರಾವತ್ ಅವರ ಯೋಜನೆಯಾಗಿತ್ತು.
ಇದರ ಜತೆಗೆ, ನೌಕಾಪಡೆಗೆ ಒಂದು ಸಮಗ್ರ ಕಮಾಂಡ್, ವಾಯುಪಡೆಗಾಗಿ ವಾಯು ರಕ್ಷಣಾ ಕಮಾಂಡ್ ರಚನೆ ಹಾಗೂ ಸಂಯುಕ್ತ ತರಬೇತಿ ಕಮಾಂಡ್ ರಚಿಸುವುದು ಸಹ ಏಕೀಕೃತ ಕಮಾಂಡ್ ಯೋಜನೆಯಲ್ಲಿ ಸೇರಿದೆ.
ಆದರೆ ಈ ಯೋಜನೆಗಳು ಹೇಳಿದಷ್ಟು ಸುಲಭವಾಗಿರಲಿಲ್ಲ,. ಏಕೆಂದರೆ ವಾಯುಪಡೆ ಈ ಯೋಜನೆಗೆ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿತ್ತು ಹಾಗೂ ರಕ್ಷಣಾ ಪಡೆಗಳ ಒಳಗಿನಿಂದಲೇ ಟೀಕೆಗಳೂ ಕೇಳಿಬಂದಿದ್ದವು
ಆದರೆ ಜನರಲ್ ರಾವತ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರ ವಿಶೇಷ ಗೌರವಕ್ಕೆ ಒಳಗಾಗಿದ್ದರಿಂದ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಅವರು ಸಫಲರಾಗುವ ಹಾದಿಯಲ್ಲಿದ್ದರು. ಈ ಪೈಕಿ, ನೌಕಾಪಡೆಯ ಮೊದಲ ಏಕೀಕೃತ ಕಮಾಂಡ್ 2022ರ ಮಧ್ಯಭಾಗದಲ್ಲೇ ಕಾರ್ಯಗತಗೊಳ್ಳುವ ಹಂತದಲ್ಲಿದೆ. ರಾವತ್ ಅವರ ಅಕಾಲಿಕ ಸಾವು ಏಕೀಕೃತ ಕಮಾಂಡ್‌ಗಳನ್ನು ರಚನೆಯನ್ನು ಅತಂತ್ರಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
1978ರಲ್ಲಿ ಗೋರ್ಖಾ ರೈಫಲ್ಸ್ ಸೇರ್ಪಡೆ: 1978ರ ಡಿಸೆಂಬರ್‌ನಲ್ಲಿ 11ನೇ ಗೋರ್ಖಾ ರೈಫಲ್ಸ್‌ನ 5ನೇ ಬೆಟಾಲಿಯನ್‌ಗೆ ಸೇರ್ಪಡೆಯಾದ ಬಿಪಿನ್ ರಾವತ್ ಅವರು 2017ರ ಜನವರಿ 1ರಿಂದ ಸೇನಾಪಡೆಯ ಮುಖ್ಯಸ್ಥರಾಗಿ ನಿಯೋಜನೆಗೊಂಡರು. ಉತ್ತರಾಖಂಡದ ಪೌರಿ ಘರ್ವಾಲ್‌ನವರಾದ ಅವರು ಯೋಧರ ಕುಟುಂಬದ ಕುಡಿ. ಅವರ ತಂದೆ ಲಕ್ಷ್ಮಣ ಸಿಂಗ್ ರಾವತ್ ಅವರು ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದರು ಹಾಗೂ 10 ಕಾರ್ಪ್ಸ್ ಅನ್ನು ಮುನ್ನಡೆಸಿದ್ದರು.
ರಾವತ್ ಅವರು ಪೂರ್ವ ವಿಭಾಗದಲ್ಲಿನ ಪದಾತಿ ದಳವೊಂದನ್ನು ಮುನ್ನಡೆಸಿದ್ದರು. ರಾಷ್ಟ್ರೀಯ ರೈಫಲ್ಸ್, ಕಾಶ್ಮೀರ ಕಣಿವೆಯ ಪದಾತಿ ದಳ, ಪೂರ್ವ ವಿಭಾಗದ ಕಾರ್ಪ್ಸ್ ಹಾಗೂ ದಕ್ಷಿಣ ಕಮಾಂಡ್‌ಗಳ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು. 2016ರ ಆಗಸ್ಟ್‌ನಲ್ಲಿ ಅವರು ಸೇನಾಪಡೆಯ ಉಪಮುಖ್ಯಸ್ಥರಾಗಿ ನಿಯುಕ್ತರಾದರು.
ರಾವತ್ ಅವರು ವೈಸ್ ಚೀಫ್ ಆಗಿದ್ದ ಸಮಯದಲ್ಲೇ ಭಾರತವು ಪಾಕಿಸ್ತಾನದ ವಿರುದ್ಧ ನಿರ್ದಿಷ್ಟ ದಾಳಿ (ಸರ್ಜಿಕಲ್ ಸ್ಟ್ರೈಕ್) ನಡೆಸಿತ್ತು. ಆಗ ಅವರು ಸೇನಾಪಡೆಯ ಕಾರ್ಯಾಚರಣೆಯನ್ನು ನೋಡಿಕೊಂಡಿದ್ದರು. ಗಡಿಯಾಚೆಗೆ ಹೋಗಿ ದಾಳಿ ನಡೆಸುವ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತವು ಗಡಿ ಭಾಗದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬಯಸಿದ್ದರೂ, ಅಗತ್ಯಬಿದ್ದರೆ ಗಡಿಯಲ್ಲಿ ಬಲಪ್ರಯೋಗ ನಡೆಸುವುದಕ್ಕೆ ಹೇಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತಿದ್ದರು.
ಸೇನಾ ಮುಖ್ಯಸ್ಥರಾಗಿ ರಾವತ್ ಅವರು ಭಾರತೀಯ ಸೇನೆಯಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದ್ದರು. ಸೇನೆಯೊಳಗೆ ಕುಂದುಕೊರತೆ ನಿವಾರಣೆಗೆ ಕ್ರಮ ಹಾಗೂ ಶತಮಾನಗಳಿಂದ ಜಾರಿಯಲ್ಲಿದ್ದ ಸೇನಾ ಸಿಬ್ಬಂದಿಯನ್ನು ಅಧಿಕಾರಿಗಳ ಸಹಾಯಕರಾಗಿ ನಿಯೋಜಿಸುವ ಪದ್ಧತಿಯನ್ನು ರದ್ದುಪಡಿಸಿದ್ದರು.
ವಿವಾದ: ರಾವತ್ ಅವರನ್ನು ಸೇನಾಪಡೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿದಾಗಲೂ ವಿವಾದ ಎದುರಾಗಿತ್ತು. ಸೇವಾ ಹಿರಿತನದ ಆಧಾರದಲ್ಲಿ ಪೂರ್ವ ಕಮಾಂಡ್‌ನ ಲೆ.ಜ.ಪ್ರವೀಣ್ ಭಕ್ಷಿ ಮತ್ತು ದಕ್ಷಿಣ ಕಮಾಂಡ್‌ನ ಲೆ.ಜ.ಪಿ.ಎಂ.ಹರೀಜ್ ಅವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಇದನ್ನು ಕಡೆಗಣಿಸಿದ ಮೋದಿ ಸರ್ಕಾರ ರಾವತ್ ಅವರನ್ನು ಸೇನಾಪಡೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿತ್ತು.
ಅತ್ಯಂತ ಸ್ನೇಹಮಯಿಯಾಗಿದ್ದ ರಾವತ್ ಅವರು ಪತ್ರಿಕೋದ್ಯಮ (ಮಾಧ್ಯಮ ಮತ್ತು ಸಂವಹನ) ವ್ಯಾಸಂಗ ಮಾಡಿದವರು. ಸಹಜವಾಗಿಯೇ ಅವರು ಪತ್ರಕರ್ತರಿಗೆ ಹತ್ತಿರವಾಗಿದ್ದರು. ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.