ADVERTISEMENT

ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ

ಪಿಟಿಐ
Published 30 ಜೂನ್ 2024, 15:24 IST
Last Updated 30 ಜೂನ್ 2024, 15:24 IST
<div class="paragraphs"><p>ಲೆಫ್ಟಿನೆಂಟ್ ಜನರಲ್‌ ಉಪೇಂದ್ರ ದ್ವಿವೇದಿ</p></div>

ಲೆಫ್ಟಿನೆಂಟ್ ಜನರಲ್‌ ಉಪೇಂದ್ರ ದ್ವಿವೇದಿ

   

ನವದೆಹಲಿ: ಭಾರತೀಯ ಸೇನೆಯ 30ನೇ ಮುಖ್ಯಸ್ಥರಾಗಿ ಜನರಲ್‌ ಉಪೇಂದ್ರ ದ್ವಿವೇದಿ ಅವರು ಭಾನುವಾರ ಅಧಿಕಾರ ಸ್ವೀಕರಿಸಿದರು.

ಸೇನೆಯಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕರ್ತವ್ಯ ನಿರ್ವಹಿಸಿದ ಬಳಿಕ ನಿವೃತ್ತಿ ಹೊಂದಿದ ಜನರಲ್‌ ಮನೋಜ್‌ ಪಾಂಡೆ ಅವರು ದ್ವಿವೇದಿ ಅವರಿಗೆ ಅಧಿಕಾರಿ ಹಸ್ತಾಂತರ ಮಾಡಿದರು.

ADVERTISEMENT

ಚೀನಾ ಮತ್ತು ಪಾಕಿಸ್ತಾನ ಗಡಿಗಳಲ್ಲಿ ಹಲವು ಕಾರ್ಯಾಚರಣೆಗಳ ಅನುಭವವನ್ನು ದ್ವಿವೇದಿ ಹೊಂದಿದ್ದಾರೆ. ಭಾರತವು ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಸೇರಿದಂತೆ ಗಡಿಗಳಲ್ಲಿ ಭದ್ರತಾ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಅವರು ಸೇನೆಯ ಮುಖ್ಯಸ್ಥರಾಗಿದ್ದಾರೆ.

‘ಜನರಲ್‌ ದ್ವಿವೇದಿ ಅವರು ಅಪಾರ ಅನುಭವ ಮತ್ತು ಉತ್ತಮ ಸೇವಾ ದಾಖಲೆಗಳನ್ನು ಹೊಂದಿದ್ದಾರೆ. ಅತ್ಯುತ್ತಮ ಯೋಜನೆಗಳನ್ನು ರೂಪಿಸಿ, ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದನ್ನು ಕರಗತ ಮಾಡಿಕೊಂಡಿಸಿದ್ದಾರೆ’ ಎಂದು ಸೇನೆ ಹೇಳಿದೆ.

ಅವರು ಫೆಬ್ರುವರಿ 19ರಿಂದ ಸೇನೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ‌. ಅದಕ್ಕೂ ಮುನ್ನ ಅವರು 2022ರಿಂದ 2024ರವರೆಗೆ ಉತ್ತರ ಕಮಾಂಡ್‌ನ ಜನರಲ್‌ ಆಫೀಸರ್‌ ಕಮಾಂಡಿಂಗ್‌–ಇನ್‌–ಚೀಫ್‌ ಆಗಿ ಸೇವೆ ಸಲ್ಲಿಸಿದ್ದರು.

ಮಧ್ಯ ಪ್ರದೇಶದ ರೇವಾ ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ಅವರನ್ನು 1984ರಲ್ಲಿ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನ ರೆಜಿಮೆಂಟ್‌ಗೆ ನಿಯೋಜಿಸಲಾಗಿತ್ತು.

ಚೀನಾದ ಜತೆ ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಸೇರಿದಂತೆ ವಿವಿಧ ಭದ್ರತಾ ಸವಾಲುಗಳನ್ನು ಭಾರತ ಎದುರಿಸುತ್ತಿರುವ ಸಮಯದಲ್ಲಿ ಜನರಲ್‌ ದ್ವಿವೇದಿ ಅವರು 13 ಲಕ್ಷ ಯೋಧರಿರುವ ಬಲಿಷ್ಠ ಸೇನೆಯ ನೇತೃತ್ವ ವಹಿಸಿಕೊಂಡಿದ್ದಾರೆ. 

ಸೇನಾ ಸಿಬ್ಬಂದಿಯ ಮುಖ್ಯಸ್ಥರಾಗಿ ಅವರು ನೌಕಾಪಡೆ, ವಾಯುಪಡೆ ಜತೆ ಸಮನ್ವಯ ಸಾಧಿಸುವ ಕಾರ್ಯ ಮಾಡಲಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಹೆಚ್ಚುತ್ತಿರುವ ಸವಾಲು ಮತ್ತು ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಕಾರ್ಯಾಚರಣೆಗಾಗಿ ಸೇನೆಯನ್ನು ಸದಾ ಸಜ್ಜಾಗಿರುವಂತೆ ಮಾಡುವುದು ಅವರ ಆದ್ಯತೆಯಾಗಿದೆ ಎಂದು ಸೇನೆ ಹೇಳಿದೆ.

ತಮ್ಮ 40 ವರ್ಷಗಳ ಸುದೀರ್ಘ ಮತ್ತು ವಿಶಿಷ್ಟ ವೃತ್ತಿ ಜೀವನದಲ್ಲಿ ಅವರು ವಿವಿಧ ಕಮಾಂಡ್‌ಗಳಲ್ಲಿ ಮತ್ತು ವಿದೇಶಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕಗಳನ್ನು ಪಡೆದಿದ್ದಾರೆ. ದ್ವಿವೇದಿ ಅವರು ಚೀನಾದೊಂದಿಗಿನ ಗಡಿ ಸಮಸ್ಯೆಯನ್ನು ಪರಿಹರಿಸಲು ನಡೆಯುತ್ತಿರುವ ಮಾತುಕತೆಗಳಲ್ಲೂ ಸಕ್ರಿಯವಾಗಿ ತೊಡಗಿದ್ದಾರೆ. 

ಸೇನಾ ನೌಕಾ ಪಡೆಗಳ ಮುಖ್ಯಸ್ಥರು ಸಹಪಾಠಿಗಳು

ಹೊಸದಾಗಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿರುವ ಜನರಲ್‌ ಉಪೇಂದ್ರ ದ್ವಿವೇದಿ ಮತ್ತು ನೌಕಾಪಡೆಯ ಮುಖ್ಯಸ್ಥರಾಗಿರುವ ಅಡ್ಮಿರಲ್‌ ದಿನೇಶ್‌ ಕುಮಾರ್‌ ತ್ರಿಪಾಠಿ ಅವರು ಒಂದೇ ಸೈನಿಕ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು ಎಂಬುದು ವಿಶೇಷ. ತ್ರಿಪಾಠಿ ಅವರು ತಿಂಗಳ ಹಿಂದೆಯಷ್ಟೇ ನೌಕಾಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಅವರ ಬಾಲ್ಯ ಸ್ನೇಹಿತ ದ್ವಿವೇದಿ ಅವರು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಇಬ್ಬರೂ ಮಧ್ಯ ಪ್ರದೇಶದ ರೇವಾ ಸೈನಿಕ ಶಾಲೆಯಲ್ಲಿ 1973ರಲ್ಲಿ ವಿದ್ಯಾರ್ಥಿಗಳಾಗಿದ್ದರು. ಒಂದೇ ಶಾಲೆಯ ಇಬ್ಬರು ಸ್ನೇಹಿತರು ಮಿಲಿಟರಿಯ ಎರಡು ಶಾಖೆಗಳ ಉನ್ನತ ಹುದ್ದೆಗಳಿಗೆ ತಲುಪಿರುವುದು ಇದೇ ಮೊದಲು. ತ್ರಿಪಾಠಿ ಅವರು ಬಾಂಗ್ಲಾದೇಶ ಪ್ರವಾಸದಲ್ಲಿ ಇರುವ ಕಾರಣ ತಮ್ಮ ಸಹಪಾಠಿಯನ್ನು ಸ್ವಾಗತಿಸಲು ಲಭ್ಯರಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.