ADVERTISEMENT

ಶಾಂತಿಗೊಂದು ಅವಕಾಶ ಕೊಡಿ: ಕಾಶ್ಮೀರ ಜನರಿಗೆ ಭೂಸೇನಾ ಮುಖ್ಯಸ್ಥ ಮನವಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 1:49 IST
Last Updated 5 ಸೆಪ್ಟೆಂಬರ್ 2019, 1:49 IST
   

ನವದೆಹಲಿ: 'ಕಣಿವೆ ರಾಜ್ಯದ ಒಂದಿಡಿ ತಲೆಮಾರು ಶಾಂತಿ ಅನುಭವಿಸಿಲ್ಲ. ಇನ್ನಾದರೂ ಮನಸ್ಸು ಬದಲಿಸಿ. ಬಂದೂಕು ಕೆಳಗಿಡಿ, ಶಾಂತಿಯನ್ನು ಅಪ್ಪಿಕೊಳ್ಳಿ' ಎಂದು ಭೂಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಮನವಿ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ಪರಿಚ್ಛೇದ ರದ್ದು ಮಾಡಿ ಒಂದು ತಿಂಗಳಾದ ಹಿನ್ನೆಲೆಯಲ್ಲಿ 'ಹಿಂದೂಸ್ತಾನ್ ಟೈಮ್ಸ್'ಗೆ ವಿಶೇಷ ಸಂದರ್ಶನ ನೀಡಿರುವ ರಾವತ್, 30 ವರ್ಷ ರಕ್ತ ಸುರಿಸಿ ಸಾಧಿಸಿದ್ದಾದರೂ ಏನು? ಇನ್ನಾದರೂ ಶಾಂತಿಯುತ ಬದುಕಿಗೆ ಮರಳಿ ಬನ್ನಿ ಎಂದು ವಿನಂತಿಸಿದ್ದಾರೆ.

ಸಂವಿಧಾನದ 370ನೇ ವಿಧಿ ರದ್ದತಿ ನಿರ್ಧಾರ ಮತ್ತು ಅದನ್ನು ಘೋಷಿಸಲು ಆರಿಸಿಕೊಂಡ ಸಮಯದ ಬಗ್ಗೆ ಕೇಂದ್ರ ಸರ್ಕಾರವನ್ನು ಶ್ಲಾಘಿಸಿರುವ ಅವರು, ಯಾವುದೇ ಪರಿಸ್ಥಿತಿ ಎದುರಿಸಲು ಸೇನೆ ಸನ್ನದ್ಧವಾಗಿದೆ ಎಂದಿದ್ದಾರೆ.

ADVERTISEMENT

'ಉಗ್ರಗಾಮಿ ಸಂಘಟನೆಗಳಾದ ಜೈಷ್ ಎ ಮೊಹಮದ್ ಮತ್ತು ಲಷ್ಕರ್ ಎ ತಯ್ಯಬಾ ವಿರುದ್ಧ ಕಠಿಣ ಕ್ರಮ ಜರುಗಿಸದ ಪಾಕಿಸ್ತಾನವು ವಿಶ್ವ ಆರ್ಥಿಕ ಕಾರ್ಯಪಡೆಯ ಕೆಂಗಣ್ಣಿಗೆ ಗುರಿಯಾಗಿತ್ತು. 2018ರ ಜೂನ್ ತಿಂಗಳಲ್ಲಿ ಕಾರ್ಯಪಡೆಯು ಪಾಕಿಸ್ತಾನವನ್ನು ಕಂದು ಪಟ್ಟಿಗೆ (ಗ್ರೇ ಲಿಸ್ಟ್) ಸೇರಿಸಿತ್ತು.ಅಕ್ಟೋಬರ್ 2019ರ ಒಳಗೆ ಗಮನಾರ್ಹ ಎನಿಸುವಂಥ ಕ್ರಮಗಳನ್ನು ಜರುಗಿಸದಿದ್ದರೆ ಕಪ್ಪಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಿತ್ತು' ಎಂದು ರಾವತ್ ನೆನಪಿಸಿಕೊಂಡಿದ್ದಾರೆ.

'ಪಾಕಿಸ್ತಾನವನ್ನು ಆರ್ಥಿಕ ಕಾರ್ಯಪಡೆಯು ಕಪ್ಪುಪಟ್ಟಿಗೆ ಸೇರಿಸಿದರೆ, ಆ ದೇಶವು ಒಂದು ರೀತಿಯಲ್ಲಿ ದಿಗ್ಬಂಧನ ಅನುಭವಿಸುವ ಸ್ಥಿತಿ ತಲುಪುತ್ತದೆ. ಈಗ ಪಾಕಿಸ್ತಾನವು ಉಗ್ರಗಾಮಿ ಸಂಘಗಳ ವಿರುದ್ಧ ಏನಾದರೂ ಮಾಡಲೇಬೇಕಾದ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಕ್ರಮ‌ ಮಹತ್ವ ಪಡೆದುಕೊಳ್ಳುತ್ತದೆ' ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.

'ಈ ಬಾರಿ ನಾವು ಉಗ್ರಗಾಮಿಗಳಿಗೂ ಶಾಂತಿಯುತ ಜೀವನಕ್ಕೆ ಮರಳಿಬರಲು ಅವಕಾಶ ಕೊಡುತ್ತಿದ್ದೇವೆ. ಅವರ ಬೆನ್ನಟ್ಟುತ್ತಿಲ್ಲ, ತಪಾಸಣೆ ಮತ್ತು ಗುಂಡಿನ ಚಕಮಕಿಗಳೂ ಕಡಿಮೆಯಾಗಿವೆ. ಯಾರದೋ ಮಾತು ಕೇಳಿ ಬದುಕು ಹಾಳುಮಾಡಿಕೊಳ್ಳಬೇಡಿ. ಸಿಕ್ಕಿರುವ ಅವಕಾಶ ಸದುಪಯೋಗಪಡಿಸಿಕೊಳ್ಳಿ.‌ ಬಂದೂಕು ಕೆಳಗಿಡಿ' ಎಂದು ಕಿವಿಮಾತು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.