ನವದೆಹಲಿ: ಸಾಮಾನ್ಯ ದರ್ಜೆಯ ರೈಲ್ವೆ ಕೋಚುಗಳ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕೈಗೆಟಕುವ ಬೆಲೆಗೆ ಆಹಾರ ಮತ್ತು ನೀರು ನೀಡಲು ಭಾರತೀಯ ರೈಲ್ವೆ ಸಿದ್ಧತೆ ನಡೆಸಿದೆ.
ದ್ವಿತೀಯ ದರ್ಜೆಯ ಮುಂಗಡ ಕಾಯ್ದಿರಿಸುವಿಕೆಗೆ ಅವಕಾಶವಿಲ್ಲದ ಕೋಚ್‌ಗಳಲ್ಲಿ ಪ್ರಯಾಣಿಸುವವರಿಗೆ ಈ ಸೌಲಭ್ಯ ಸಿಗಲಿದೆ. ರೈಲು ನಿಲ್ದಾಣಗಳ ಪ್ಲಾಟ್‌ಫಾರ್ಮ್‌ನಲ್ಲಿ ಜನರಲ್ ಕೊಚ್‌ಗೆ ಸಮೀಪದಲ್ಲಿ ಸ್ಥಾಪಿಸುವ ಮಳಿಗೆಯಲ್ಲಿ ಆಹಾರ ಹಾಗೂ ನೀರಿನ ಪೊಟ್ಟಣಗಳನ್ನು ಇಡಲಾಗಿರುತ್ತದೆ ಎಂದು ರೈಲ್ವೆ ಮಂಡಳಿ ಹೇಳಿದೆ.
ಹೀಗೆ ನೀಡುವ ಆಹಾರವನ್ನು ಎರಡು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ₹20ಕ್ಕೆ ಪೂರಿ, ಆಲೂ ಹಾಗೂ ಉಪ್ಪಿನಕಾಯಿ ಸಿಗಲಿದೆ. ₹50ಕ್ಕೆ ದಕ್ಷಿಣ ಭಾರತೀಯರು ಹಾಗೂ ಉತ್ತರ ಭಾರತೀಯರ ಆಹಾರ ಶೈಲಿಗೆ ಅನ್ವಯಿಸುವಂತೆ ಅನ್ನ, ರಾಜ್ಮಾ, ಚೋಲೆ, ಕಿಚಡಿ, ಕುಲ್ಚೆ, ಭತೂರೆ, ಪಾವ್ ಬಾಜಿ ಹಾಗೂ ಮಸಾಲ ದೋಸೆ ಸಿಗಲಿದೆ. 200 ಮಿ.ಲೀ. ನೀರಿರುವ ಲೋಟವನ್ನು ಇದರೊಂದಿಗೆ ನೀಡಲಾಗುತ್ತದೆ.
ಸಾಮಾನ್ಯವಾಗಿ ಮೇಲ್/ ಎಕ್ಸ್‌ಪ್ರೆಸ್ ರೈಲಿನಲ್ಲಿ ಕನಿಷ್ಠ ಎರಡು ಸಾಮಾನ್ಯ ಕೋಚ್‌ಗಳಿರುತ್ತವೆ. ಒಂದು ಕೋಚ್ ಲೋಕೊಮೋಟಿವ್ ಬಳಿ ಹಾಗೂ ಒಂದು ರೈಲಿನ ಕೊನೆಯಲ್ಲಿರುತ್ತದೆ. ಈ ಕೋಚುಗಳ ಬಳಿಯಲ್ಲೇ ಈ ಆಹಾರದ ಪೊಟ್ಟಣ ನೀಡುವ ಮಳಿಗೆಗಳು ಇರುವಂತೆ ವ್ಯವಸ್ಥೆ ಮಾಡಲು ರೈಲ್ವೆ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದೆ.
ಈ ಆಹಾರಗಳು ರೆಫ್ರೆಷ್‌ಮೆಂಟ್ ರೂಮ್ಸ್ ಹಾಗೂ ಜನ್ ಆಹಾರ್‌ಗಳ ಅಡುಗೆಕೋಣೆಯಲ್ಲಿ ಸಿದ್ಧವಾಗಲಿವೆ ಎಂದು ಹೇಳಲಾಗಿದೆ. ಆಹಾರ ತಯಾರಿಕೆಯ ಸ್ಥಗಳನ್ನು ಆಯಾ ರೈಲ್ವೆ ವಲಯಗಳು ನಿರ್ಧರಿಸುತ್ತವೆ.
ಜತೆಗೆ ಎಲ್ಲಿ ಕೌಂಟರ್‌ಗಳನ್ನು ತೆರೆಯಬೇಕು ಎಂಬುದನ್ನೂ ವಲಯ ಮಟ್ಟದಲ್ಲೇ ನಿರ್ಧಾರಗೊಳ್ಳಲಿದೆ. ಈ ವ್ಯವಸ್ಥೆ ಪ್ರಾಯೋಗಿಕವಾಗಿ ಆರು ತಿಂಗಳ ಕಾಲ ನಡೆಯಲಿದೆ. ಇದಕ್ಕಾಗಿ ದೇಶದಾದ್ಯಂತ 51 ನಿಲ್ದಾಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಮಂಡಳಿ ಹೇಳಿದೆ.
ರಾಜ್ಯದಲ್ಲಿರುವ ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಸದ್ಯ ಈ ಸೌಲಭ್ಯ ಲಭ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.