ನವದೆಹಲಿ: ಮರೆವಿನ ಕಾಯಿಲೆ(ಅಲ್ಝೈಮರ್)ಗೆ ಒಳಗಾಗಿದ್ದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್(88), ಕಳೆದ 8 ವರ್ಷಕ್ಕೂ ಹೆಚ್ಚು ಅವಧಿ ಹಾಸಿಗೆಯಲ್ಲಿಯೇ ಕಳೆದಿದ್ದರು. ಮಂಗಳವಾರ ಬೆಳಿಗ್ಗೆ ನಿಧನರಾದ ಜಾರ್ಜ್ ಅವರ ಅಂತ್ಯಕ್ರಿಯೆ ಬುಧವಾರ ನಡೆಯುವ ಸಾಧ್ಯತೆಯಿದೆ.
ಕೆಮ್ಮು ಮತ್ತು ನೆಗಡಿ ಹೆಚ್ಚಾದಕಾರಣ ಜಾರ್ಜ್ ಅವರನ್ನು ಅವರ ಪತ್ನಿ ಲೈಲಾ ಫರ್ನಾಂಡಿಸ್ ಇಲ್ಲಿನ ಸಾಕೇತ್‌ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ಇಂದು ಬೆಳಿಗ್ಗೆ ದಾಖಲಿಸಿದ್ದರು. ಆದರೆ, ಸಮಾಜವಾದಿ ನಾಯಕ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ:ಎಲ್ಲಿದ್ದೀರಿ ಜಾರ್ಜ್? ಹೇಗಿದ್ದೀರಿ ಜಾರ್ಜ್?
ಜಾರ್ಜ್ ಫರ್ನಾಂಡಿಸ್ ಅವರ ಪುತ್ರ ಸಿಯಾನ್ ಫರ್ನಾಂಡಿಸ್ ನ್ಯೂಯಾರ್ಕ್‌ನಲ್ಲಿದ್ದು, ನಾಳೆ ಅಥವಾ ನಾಡಿದ್ದು ನವದೆಹಲಿ ತಲುಪುವ ಸಾಧ್ಯತೆಯಿದೆ. ಸಿಯಾನ್ ಬಂದ ನಂತರವಷ್ಟೇ ಜಾರ್ಜ್ ಅವರ ಅಂತ್ಯಕ್ರಿಯೆ ನಡೆಸಲು ನಿಶ್ಚಯಿಸಿರುವುದಾಗಿ ತಿಳಿದಿದೆ. ಪ್ರಸ್ತುತ ಪಾರ್ಥಿವ ಶರೀರವನ್ನು ಸುರಕ್ಷಿತವಾಗಿಡಲು ವೈದ್ಯಕೀಯ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಪೃಥ್ವಿರಾಜ್ ರಸ್ತೆಯಲ್ಲಿರುವ ಕ್ರಿಶ್ಚಿಯನ್ ಸಿಮೆಟ್ರಿಯಲ್ಲಿ ಅಂತಿಮ ಸಂಸ್ಕಾರ ನಡೆಯುವ ಸಾಧ್ಯತೆಯಿದೆ.
**
ಮೊದಲುಶರೀರವನ್ನು ಹೂಳುವಂತೆ ಜಾರ್ಜ್ ಫರ್ನಾಂಡಿಸ್ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಕೊನೆಯ ದಿನಗಳಲ್ಲಿ ಶರೀರವನ್ನು ಸುಡುವಂತೆ ತಿಳಿಸಿದ್ದರು. ಹಾಗಾಗಿ, ಪಾರ್ಥಿವ ಶರೀರವನ್ನು ಸುಟ್ಟು, ಚಿತಾಭಸ್ಮವನ್ನು ಹೂಳುತ್ತೇವೆ.
– ಜಯಾ ಜೇಟ್ಲಿ, ಸಾಮಾಜಿಕ ಕಾರ್ಯಕರ್ತೆ, ಸಮತಾ ಪಕ್ಷದ ಮಾಜಿ ಅಧ್ಯಕ್ಷೆ
**
ಇದನ್ನೂ ಓದಿ:ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ
ಮಂಗಳೂರಿನಲ್ಲಿ ಜನಿಸಿದ ಜಾರ್ಜ್, ಮುಂಬೈನಲ್ಲಿ ಕಾರ್ಮಿಕ ಸಂಘಟನೆಗಳ ಹೋರಾಟಗಳ ನೇತೃತ್ವ ವಹಿಸಿಕೊಂಡವರು. ಬಿಹಾರದಿಂದ ಚುನಾವಣಾ ಕಣಕ್ಕಿಳಿದು ದೆಹಲಿಯನ್ನು ಕರ್ಮಭೂಮಿಯಾಗಿಸಿಕೊಂಡವರು. ಇಡೀ ದೇಶದ ಬಹುತೇಕ ಎಲ್ಲ ಭಾಗಗಳಲ್ಲಿ ಮುಖಂಡರ, ಹೋರಾಟಗಾರರ ಸಂಪರ್ಕ ಹೊಂದಿದ್ದರು.
1998ರಿಂದ 2004ರ ವರೆಗೂ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್,ಮಂಗಳೂರಿನಲ್ಲಿ 1930ರಲ್ಲಿ ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ ಜಾರ್ಜ್ ಫರ್ನಾಂಡಿಸ್ ಜನಿಸಿದರು. ಇವರು ಕಾರ್ಮಿಕ ಸಂಘಟನೆಯ ನೇತಾರ, ಕೃಷಿಕ, ಸಾಮಾಜಿಕ ಕಾರ್ಯಕರ್ತ ಮತ್ತು ಪತ್ರಕರ್ತರಾಗಿದ್ದರು.ಒಂಬತ್ತು ಬಾರಿ ಲೋಕಸಭೆಗೆ ಮತ್ತು 2009ರಲ್ಲಿ ರಾಜ್ಯಸಭೆ ಪ್ರವೇಶಿಸಿದ್ದರು.
ಸಂಯುಕ್ತ ಸಮಾಜವಾದಿ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿ ಕಾಂಗ್ರೆಸ್‌ನ ಎಸ್.ಕೆ.ಪಾಟೀಲ್ ಅವರನ್ನು ಸೋಲಿಸಿ ‘ಜೈಂಟ್ ಕಿಲ್ಲರ್’ (ದೈತ್ಯ ಸಂಹಾರಕ) ಎಂದು ಪ್ರಸಿದ್ಧರಾದರು. 1969ರಲ್ಲಿ ಇವರು ಸಂಯುಕ್ತ ಸಮಾಜವಾದಿ ಪಕ್ಷದ ಪ್ರಧಾನಕಾರ್ಯದರ್ಶಿಯಾದರು. 1974ರಲ್ಲಿ ರಾಷ್ಟ್ರವ್ಯಾಪಿ ರೈಲ್ವೆ ಮುಷ್ಕರದ ಮುಂದಾಳಾಗಿದ್ದರು.
ವಾಜಪೇಯಿ ಅವರ ಅವಧಿಯಲ್ಲಿ ಪೋಖ್ರಾನ್ ಪರಮಾಣು ಪರೀಕ್ಷೆ(1998) ಹಾಗೂ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿ ಅತ್ಯಂತ ಪ್ರಭಾವಶಾಲಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಶವಪೆಟ್ಟಿಗೆ ಹಗರಣದ ಸುಳಿಯಲ್ಲಿ ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ಇದನ್ನೂ ಓದಿ:ಜಾರ್ಜ್ ನೆನೆದು ಗಣ್ಯರ ಕಂಬನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.